ಇಕ್ಕೇರಿ ನಾಯಕರು ಪೋಷಿಸಿದ ವಿನ್ಯಾಸಗಳು-ಮಲೆನಾಡಿನ ಸಾಮ್ರಾಜ್ಯದ ಚಾರಿತ್ರಿಕೆ ಆಭರಣಗಳ ವಿಶೇಷತೆ:

1 min read

ಇಕ್ಕೇರಿ ನಾಯಕರು ಪೋಷಿಸಿದ ವಿನ್ಯಾಸಗಳು-ಮಲೆನಾಡಿನ ಸಾಮ್ರಾಜ್ಯದ ಚಾರಿತ್ರಿಕೆ ಆಭರಣಗಳ ವಿಶೇಷತೆ:

 

ಎಲ್ಲಾ ರಾಜ ಮನೆತನಗಳಂತೆ ಇಕ್ಕೇರಿ ನಾಯಕರು ಸಹ ಹಲವಾರು ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಒತ್ತಿದ್ದು ಅದರಲ್ಲಿ ಶಿಲ್ಪ ಕಲೆ ಮತ್ತು ಆಭರಣ ವಿನ್ಯಾಸ ಕೂಡಾ ಒಂದು. ಉದಾಹರಣೆಗೆ ವಿಜಯನಗರದ ಅಚ್ಯುತ ದೇವರಾಯರ ಕಾಲದಲ್ಲಿ ರಾಜ ಪೋಷಣೆ ಪಡೆದ ಗಂಡಭೇರುಂಡ ಶಿಲ್ಪ ಎಷ್ಟರ ಮಟ್ಟಿಗೆ ಪ್ರಸಿದ್ಧಿ ಪಡೆಯುತ್ತದೆ ಅಂದರೆ ೧೫೬೫ರ ತಾಳಿಕೋಟೆ ಯುದ್ಧದ ನಂತರ ಈ ಗಂಡಭೇರುಂಡ ಲಾಂಛನವನ್ನು ವಿಜಯನಗರದ ಅಧೀನದಲ್ಲಿ ಇದ್ದ ಸಾಮಂತರು ಸ್ವಲ್ಪ ಬದಲಾವಣೆ ಪಡಿಸಿಕೊಂಡು ಅದನ್ನು ಮುಂದುವರಿಸಿಕೊಂಡು ಹೋಗುತ್ತಾರೆ. ವಿಜಯನಗರ ಸಾಮಂತರಲ್ಲಿ ಇಕ್ಕೇರಿ ನಾಯಕರು ಸಹಾ ಒಬ್ಬರು. 

ಇನ್ನೂ ಇಕ್ಕೇರಿ ನಾಯಕರು ತಮ್ಮದೇ ಸ್ವತಂತ್ರ ಸಾಮ್ರಾಜ್ಯವನ್ನು ಹೊಂದಿದ ನಂತರ ತಮ್ಮದೇ ಆದ ಶಿಲ್ಪ ಕಲೆ ಮತ್ತೆ ವಿಶಿಷ್ಠವಾದ ವಿನ್ಯಾಸಕ್ಕೆ ಸಾಕಷ್ಟು ಪ್ರೋತ್ಸಾಹ ಮತ್ತು ಆದ್ಯತೆ ನೀಡುತ್ತಾರೆ. ಇವುಗಳಲ್ಲಿ ಗಂಡಭೇರುಂಡ ತರಹವೇ ಹೋಲುವ ಒಂದು ಆಕೃತಿ ಅಂದಿನ ಕಾಲದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆಯುತ್ತದೆ. ಹಿರಿಯ ವೆಂಕಟಪ್ಪ ನಾಯಕರ ಕಾಲದಲ್ಲಿ ಗಂಡಭೇರುಂಡ ಮಾದರಿಯಲ್ಲಿ ಅದಕ್ಕೆ ತದ್ವಿರುದ್ಧವಾಗಿ ಒಂದಕ್ಕೊಂದು ನೋಡುವ ಗಿಳಿಗಳ ಶಿಲ್ಪ ಕೆತ್ತನೆ ಮತ್ತು ಆಭರಣ ವಿನ್ಯಾಸದ ಮೂಲಕ ಚಾಲ್ತಿಗೆ ಬರುತ್ತದೆ. ಇನ್ನೂ ರಾಣಿ ಚೆನ್ನಮ್ಮಾಜಿಯ ಕಾಲದಲ್ಲಿ ಗಿಳಿಗಳ ಸ್ಥಾನವನ್ನು ಸಿಂಹಗಳು ತೆಗೆದುಕೊಳ್ಳುತ್ತವೆ. ಇಂದಿಗೂ ಸಹಾ ಬಿದನೂರಿನ ಸಾಕಷ್ಟು ಮನೆಗಳಲ್ಲಿ ಅಥವಾ ಇಕ್ಕೇರಿ ನಾಯಕರ ಸಂಸ್ಥಾನದಲ್ಲಿ ಕಾರ್ಯನಿರ್ವಹಿಸಿದ ಮನೆತನಗಳ ಅಧೀನದಲ್ಲಿ ಇಂತಹ ವಿನ್ಯಾಸ ಹೋಲುವ ಅಮೂಲ್ಯವಾದ ಆಭರಣಗಳನ್ನು ಕಾಣಬಹುದು. 

ಇತ್ತೀಚೆಗೆ ಬಿದನೂರಿನ ಶ್ರೀ ಪ್ರಕಾಶ್‌ ಶೇಟ್ ಅವರಿಗೆ ಇಕ್ಕೇರಿ ನಾಯಕರ ಕಾಲದ ಎರಡು ಚಿನ್ನದ ಪದಕ (Pendent) ನೋಡುವ ಸೌಭಾಗ್ಯ ಸಿಕ್ಕಿತ್ತು. ಇವುಗಳಲ್ಲಿ ಒಂದು ಪದಕದ ವಿನ್ಯಾಸ ನಾನು ಮೇಲೆ ಹೇಳಿದ ವಿನ್ಯಾಸ ಹೋಲುತ್ತಿದ್ದು ಇದರ ತೂಕ ಸರಿಸುಮಾರು 3.43 ಗ್ರಾಮ್ ಅಂದರೆ ಒಂದು ಇಕ್ಕೇರಿ ಪಗೋಡಕ್ಕೆ ಸರಿಸಮನಾಗಿರುತ್ತದೆ. ಇಂತಹ ಅದೆಷ್ಟೋ ಮಲೆನಾಡು ಶೈಲಿಯ ಆಭರಣಗಳು ಮರೆಯಾಗಿದ್ದು ಇನ್ನೂ ಕೆಲವು ಭದ್ರವಾಗಿ ತಿಜೋರಿಗಳಲ್ಲಿ ಹೂತು ಹೋಗಿವೆ. 

 

-ಅಜಯ್‌ ಕುಮಾರ್‌ ಶರ್ಮ, 

ಹವ್ಯಾಸಿ ಬರಹಗಾರ, ಇತಿಹಾಸ ಅಧ್ಯಯನಕಾರ 

ಮತ್ತು ವನ್ಯಜೀವಿ ಪರಿಸರ ಕಾರ್ಯಕರ್ತ, ಶಿವಮೊಗ್ಗ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd