`ನಾವೆಲ್ಲಿದ್ದರೂ ಕನ್ನಡಿಗರೇ’ ಎಂದ ಪಡಿಕಲ್
ಐಪಿಎಲ್ ನಲ್ಲಿ ಕರ್ನಾಟಕದ ಕ್ರಿಕೆಟರ್ ಗಳು ಮಿಂಚುತ್ತಿದ್ದಾರೆ. ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಪಂಜಾಬ್ ಕಿಂಗ್ಸ್ ನಲ್ಲಿ ಮಿಂಚಿನ ಆಟವಾಡುತ್ತಿದ್ದಾರೆ.
ದೇವದತ್ ಪಡಿಕಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಫರ್ಫಾಮರ್. ಉತ್ತಪ್ಪ ಮತ್ತು ಗೌತಮ್ ಸಿಎಸ್‍ಕೆಯಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ಸನ್ ರೈಸರ್ಸ್ ತಂಡದಲ್ಲಿ ಸುಚಿತ್ ಮತ್ತು ಮನೀಷ್ ಪಾಂಡೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅನಿಲ್ ಕುಂಬ್ಳೆ ಸೇರಿದಂತೆ ಕರ್ನಾಟಕದ ಹಲವು ಕೋಚ್‍ಗಳು, ಸಪೋಟಿರ್ಂಗ್ ಸ್ಟಾಫ್ ಗಳು ಕೂಡ ಐಪಿಎಲ್ ನ ಭಾಗವಾಗಿದ್ದಾರೆ.
ಇದೆಲ್ಲದರ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಿಂಚಿನ ಆಟವಾಡಲು ಶುರು ಮಾಡಿಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಆರ್‍ಸಿಬಿ ಹವಾ ಜೋರಾಗಿದೆ.
ಬೆಂಗಳೂರು ಮೂಲದ ಈ ತಂಡದಲ್ಲಿ ಕನ್ನಡಿಗರು ಹೆಚ್ಚಾಗಿ ಇಲ್ಲ ಅನ್ನುವ ಟೀಕೆ ಇದ್ದರೂ, ಈ ಈ ತಂಡ ಕನ್ನಡದ ಪರ ಹಾಕುವ ವಿಡಿಯೋಗಳು ಭಾರೀ ವೈರಲ್ ಆಗುತ್ತವೆ.
ಈಗ ಆರ್‍ಸಿಬಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತನ್ನ ತಂಡದ ಯುವ ಎಡಗೈ ಆರಂಭಿಕ ಬ್ಯಾಟ್ಸ್‍ಮನ್, ಕನ್ನಡಿಗ ದೇವದತ್ತ ಪಡಿಕ್ಕಲ್ ಮಾತನಾಡುತ್ತಿರುವ ವಿಡಿಯೋ ಒಂದನ್ನು ಪೋಸ್ಟ್ ಮಾಡಿದೆ. ಇದರಲ್ಲಿ ಪಡಿಕ್ಕಲ್ ಕ್ರಿಕೆಟ್‍ನಲ್ಲಿ ಕನ್ನಡ ಬಳಕೆಯ ಬಗ್ಗೆ ಕೆಲ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.
ದೇವದತ್ ಪಡಿಕಲ್ ಕನ್ನಡದಲ್ಲಿ ಮಾತನಾಡಿರುವ ವಿಡೀಯೊವನ್ನು ಆರ್ ಸಿಬಿ ಪೋಸ್ಟ್ ಮಾಡಿದ್ದು ಅದಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕನ್ನಡಿಗರು ಮೈದಾನದಲ್ಲಿ ಅಥವಾ ಹೊರಗೆ ಸಿಕ್ಕಾಗ ಕನ್ನಡದಲ್ಲೇ ಮಾತನಾಡೋದು ಅಂತ ಪಡಿಕಲ್ ಹೇಳಿರುವುದು ಕನ್ನಡ ಪ್ರೀತಿಯನ್ನು ತೋರಿಸುತ್ತಿದೆ.
ಗೌತಮ್ ಇರಲಿ ರಾಹುಲ್ ಸಾರ್ ಇರಲಿ, ನಾವೆಲ್ಲರೂ ಕನ್ನಡದಲ್ಲಿಯೇ ಮಾತನಾಡುತ್ತೇವೆ ಎಂದು ಹೇಳಿರುವುದು ಕ್ರಿಕೆಟಿಗರ ಕನ್ನಡ ಪ್ರೀತಿಗೆ ಸಾಕ್ಷಿಯಾಗಿದೆ.
ಪಡಿಕಲ್ ತನ್ನ ಕ್ರಿಕೆಟ್ ಜೀವನದ ವಿಚಾರಗಳನ್ನು ಕೂಡ ಕನ್ನಡದಲ್ಲೇ ಹಂಚಿಕೊಂಡಿದ್ದಾರೆ. ಬೇರೆ ರಾಜ್ಯದ ಆಟಗಾರರೊಂದಿಗೆ ಆಂಗ್ಲ ಹಾಗೂ ಹಿಂದಿ ಭಾಷೆಯಲ್ಲಿ ಮಾತನಾಡುತ್ತೇವೆ. ಆದರೆ ಕನ್ನಡಿಗರೆಲ್ಲ ಕನ್ನಡದಲ್ಲೇ ಮಾತಾನಾಡುತ್ತೇವೆ ಎಂದು ಹೇಳಿರುವುದು ವೈರಲ್ ಆಗಿದೆ.









