ನವದೆಹಲಿ,ಜ.12:ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ವಿಶೇಷ ಸಾಮಾನ್ಯ ಸಭೆಯಲ್ಲಿ (SGM) ದೇವಜಿತ್ ಸೈಕಿಯಾ ಅವರನ್ನು ನೂತನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಜಯ್ ಶಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಈ ಹುದ್ದೆ ಖಾಲಿ ಇತ್ತು.
ಹಂಗಾಮಿ ಕಾರ್ಯದರ್ಶಿ:ಡಿಸೆಂಬರ್ 1ರಿಂದ ಸೈಕಿಯಾ ಬಿಸಿಸಿಐನ ಹಂಗಾಮಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಈಗ ಅವರು ಅಧಿಕೃತವಾಗಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಪ್ರಮುಖ ಸಭೆ:ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಸೈಕಿಯಾ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಇತ್ತೀಚಿನ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಸೋಲಿನ ಕಾರಣಗಳನ್ನು ಚರ್ಚಿಸಲಾಯಿತು.
ಸೈಕಿಯಾ ವ್ಯಕ್ತಿ ಪರಿಚಯ:ದೇವಜಿತ್ ಸೈಕಿಯಾ ಅಸ್ಸಾಂ ಮೂಲದ ಮಾಜಿ ಕ್ರಿಕೆಟರ್. 1990-1991ರ ನಡುವೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 4 ಪಂದ್ಯಗಳನ್ನು ಆಡಿದ್ದರು. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿದ್ದ ಅವರು 53 ರನ್ ಗಳಿಸಿದ್ದರು. ಕ್ರಿಕೆಟ್ ವೃತ್ತಿಜೀವನದ ನಂತರ, ಅವರು ಕಾನೂನು ಕ್ಷೇತ್ರಕ್ಕೆ ಪ್ರವೇಶಿಸಿದರು ಮತ್ತು ಗುವಾಹಟಿ ಹೈಕೋರ್ಟ್‌ನಲ್ಲಿ ವಕೀಲರಾಗಿ ಅಭ್ಯಾಸ ಮಾಡಿದರು.
ಬಿಸಿಸಿಐ ಸಂವಿಧಾನದ ಪ್ರಕಾರ, ಯಾವುದೇ ಖಾಲಿ ಹುದ್ದೆಯನ್ನು 45 ದಿನಗಳಲ್ಲಿ ಎಸ್‌ಜಿಎಂ ಕರೆಯುವ ಮೂಲಕ ಭರ್ತಿ ಮಾಡಬೇಕು. 43ನೇ ದಿನಕ್ಕೆ ಆಯ್ಕೆ ಪ್ರಕ್ರಿಯೆ ಮುಗಿಸಲಾಗಿದೆ. ಈ ಹುದ್ದೆಗೆ ಸೈಕಿಯಾ ಮತ್ತು ಪ್ರಭತೇಜ್ ಸಿಂಗ್ ಭಾಟಿಯಾ ಮಾತ್ರ ಕಣದಲ್ಲಿದ್ದರು.