ತುಮಕೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹಿಂದೆಂದೂ ಕಾಣದ ರೀತಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ. ದೊಡ್ಡ ಆಲಹಳ್ಳಿಯಲ್ಲಿ ಸಿನಿಮಾ ಟೆಂಟ್ ನಡೆಸುತ್ತಿದ್ದ ಕಾಲದಿಂದಲೂ ರೂಢಿಸಿಕೊಂಡು ಬಂದಿರುವ ಪೋಸ್ಟರ್ ಅಂಟಿಸುವ ಚಾಳಿಯನ್ನು ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾದ ಮೇಲೆಯೂ ಬಿಟ್ಟಿಲ್ಲ. ಸಿಡಿ ಮಾಡಿಸುವುದು ಹಾಗೂ ರಾತ್ರೋರಾತ್ರಿ ಮನೆಗಳ ಮುಂದೆ ಪೋಸ್ಟರ್ ಅಂಟಿಸುವುದು ಯಾವುದೇ ರಾಜ್ಯದ ಒಬ್ಬ ಮುಖ್ಯಮಂತ್ರಿ ಮಾಡುವ ಕೆಲಸವೇ ಎಂದು ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದ್ದಾರೆ.
ತುಮಕೂರು ಜಿಲ್ಲೆಯ ಸಿ.ಎಸ್. ಪುರದಲ್ಲಿ ಮಾತನಾಡಿದ ಅವರು, ಬೆಂಗಳೂರಿನ ತಮ್ಮ ನಿವಾಸದ ಬಳಿ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ ಅಂಟಿಸಿದ ಘಟನೆ, ಅಂದಿನ ಮೈತ್ರಿ ಸರ್ಕಾರದ ರಚನೆಯ ಅಸಲಿ ಸತ್ಯ, ಗುತ್ತಿಗೆದಾರರ ಬಾಕಿ ಬಿಲ್ ಹಾಗೂ ರಿಯಲ್ ಎಸ್ಟೇಟ್ ಆರೋಪಗಳ ಕುರಿತು ಎಳೆಎಳೆಯಾಗಿ ಮಾತನಾಡುವ ಮೂಲಕ ಕಾಂಗ್ರೆಸ್ ನಾಯಕರ ಬೆವರಿಳಿಸಿದರು.
ಟೆಂಟ್ ಕಾಲದ ಪೋಸ್ಟರ್ ಚಾಳಿ; ಸಿಎಂ ಮೇಲೆ ಅಸೂಯೆ ಇಲ್ಲ, ಆದರೆ ಲೂಟಿಯೇ ಅವರ ಕೆಲಸ!
ಬೆಂಗಳೂರಿನಲ್ಲಿ ತಮ್ಮ ನಿವಾಸದ ಸುತ್ತಮುತ್ತ ರಾತ್ರಿ ವೇಳೆ ಪೋಸ್ಟರ್ ಅಂಟಿಸಿ ಕೀಳುಮಟ್ಟದ ರಾಜಕಾರಣ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಹೆಚ್.ಡಿ. ಕುಮಾರಸ್ವಾಮಿ, ಬಲಿತ ದಲಿತ ಒಂದೇ ಅಲ್ಲದೆ ಹಲವಾರು ರೀತಿಯ ಪೋಸ್ಟರ್‌ಗಳನ್ನು ಡಿಸೈನ್ ಮಾಡಿದ್ದಾರೆ. ಹಿಂದೆ ಸಿನಿಮಾ ಮಾಡುತ್ತಿದ್ದ ಕಾಲದಲ್ಲಿ ಎಲ್ಲಾ ಕಡೆ ಪೋಸ್ಟರ್ ಹಾಕುತ್ತಿದ್ದ ನೆನಪು ಮುಖ್ಯಮಂತ್ರಿಗಳಿಗೆ ಬಂದಿರಬೇಕು. ಹೀಗಾಗಿ ತಾವು ಹಿಂದೆ ಮಾಡುತ್ತಿದ್ದ ಪೋಸ್ಟರ್ ಅಂಟಿಸುವ ಕೆಲಸವನ್ನು ಈಗ ತಮ್ಮ ಕಾರ್ಯಕರ್ತರಿಗೆ ಕೊಟ್ಟಿರಬೇಕು. ನಮ್ಮ ಮನೆಯ ಮುಂದೆ ಪೋಸ್ಟರ್ ಹಾಕಿದರೆ ಜನರ ಆಕ್ರೋಶ ಮತ್ತಷ್ಟು ಹೆಚ್ಚಾಗಿ ಕಾಂಗ್ರೆಸ್ ಪಕ್ಷ ಪಾತಾಳಕ್ಕೆ ಕುಸಿಯುವ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದರು.
ಇದೇ ವೇಳೆ, ನಿಮ್ಮದೇ ಸಮುದಾಯದ ವ್ಯಕ್ತಿಯೊಬ್ಬರು ಮುಖ್ಯಮಂತ್ರಿಯಾಗಿದ್ದಾರೆ, ಅವರನ್ನು ಕೆಲಸ ಮಾಡಲು ಬಿಡಿ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನನಗೆ ಮುಖ್ಯಮಂತ್ರಿಗಳ ಬಗ್ಗೆ ಖಂಡಿತವಾಗಿಯೂ ಯಾವುದೇ ಅಸೂಯೆ ಇಲ್ಲ. ಆದರೆ, ಅವರು ರಾಜ್ಯವನ್ನು ಲೂಟಿ ಮಾಡುವುದನ್ನೇ ತಮ್ಮ ಕೆಲಸ ಎಂದು ಭಾವಿಸಿದ್ದಾರೆ ಎಂದು ಕಿಡಿಕಾರಿದರು. ಸುಳ್ಳೇ ಹೆಚ್.ಡಿ. ಕುಮಾರಸ್ವಾಮಿ ಅವರ ಮನೆ ದೇವ್ರು ಎಂದಿದ್ದ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಅವರು, ಅವರ ಮನೆ ದೇವ್ರು ಯಾರು ಎಂಬುದು ಇಡೀ ರಾಜ್ಯಕ್ಕೇ ಗೊತ್ತಿದೆ. ಈ ಮುಖ್ಯಮಂತ್ರಿ ಅಧಿಕಾರಕ್ಕೆ ಬಂದ ದಿನದಿಂದ ಹೇಳಿದ್ದೆಲ್ಲವೂ ಬರೀ ಸುಳ್ಳೇ ಎಂದು ಚಾಟಿ ಬೀಸಿದರು.
ಮಲ್ಲಿಕಾರ್ಜುನ ಖರ್ಗೆಯವರನ್ನೇ ಸಿಎಂ ಮಾಡಿ ಎಂದಿದ್ದರು ದೇವೇಗೌಡರು; ಪಿಎಂ-ಸಿಎಂ ಹುದ್ದೆ ಕಾಂಗ್ರೆಸ್ ಭಿಕ್ಷೆಯಲ್ಲ!
ಮಾತೆತ್ತಿದರೆ ದೇವೇಗೌಡರನ್ನು ಪ್ರಧಾನಿ ಮಾಡಿದ್ದು ನಾವೇ, ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದ್ದು ನಾವೇ ಎನ್ನುವ ಕಾಂಗ್ರೆಸ್ ನಾಯಕರ ಹೇಳಿಕೆ ಶುದ್ಧ ಸುಳ್ಳು ಎಂದು ಕುಮಾರಸ್ವಾಮಿ ಗುಡುಗಿದರು. ಇಂದಿನ ರಾಜಕಾರಣದಲ್ಲಿ ಶಾಸಕರಾಗಿ ಗೆದ್ದ ಕೂಡಲೇ ಸಚಿವರಾಗಬೇಕು, ಮುಖ್ಯಮಂತ್ರಿಯಾಗಬೇಕು ಎನ್ನುವ ಸಂಸ್ಕೃತಿ ಬೆಳೆದಿದೆ. ಆದರೆ ಬರೋಬ್ಬರಿ 7 ದಶಕಗಳ ಸುದೀರ್ಘ ರಾಜಕೀಯ ಜೀವನ ಹೊಂದಿರುವ ಹೆಚ್.ಡಿ. ದೇವೇಗೌಡರು ಒಬ್ಬ ಮಂತ್ರಿಯಾಗಲು ಸುಮಾರು 28 ವರ್ಷಗಳ ಕಾಲ ಕಾಯಬೇಕಾಯಿತು. ಅಂದು ಕೇಂದ್ರದಲ್ಲಿ ಸುದೀರ್ಘ ಕಾಲ ಅಧಿಕಾರ ಅನುಭವಿಸಿದ್ದ ಕಾಂಗ್ರೆಸ್ ಕೇವಲ 140-142 ಸ್ಥಾನಗಳಿಗೆ ಕುಸಿದು ದೆಹಲಿ ರಾಜಕಾರಣದಲ್ಲಿ ಬೆಲೆಯನ್ನೇ ಕಳೆದುಕೊಂಡಿತ್ತು. ಆಗ ಕಮ್ಯುನಿಸ್ಟ್ ಪಕ್ಷಗಳು ಹಾಗೂ ಇತರ ಪ್ರಾದೇಶಿಕ ಪಕ್ಷಗಳ ಒತ್ತಾಯದಿಂದ ದೇವೇಗೌಡರು ಪ್ರಧಾನಿಯಾದರೇ ಹೊರತು ಅದು ಕಾಂಗ್ರೆಸ್ ಭಿಕ್ಷೆಯಲ್ಲ. ಮುಂದೆ ದೇಶದ ಹಿತಕ್ಕಾಗಿ ಹಾಗೂ ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಕೇವಲ 11 ತಿಂಗಳಲ್ಲಿ ದೇವೇಗೌಡರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಬಿಸಾಡಿದ್ದರು ಎಂದು ಸ್ಮರಿಸಿದರು.
ಇನ್ನು 2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 38 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ 79 ಸ್ಥಾನಗಳಿಗೆ ಕುಸಿದಿತ್ತು. ನನಗೆ ಇವರೊಂದಿಗೆ ಸರ್ಕಾರ ರಚಿಸುವ ಯಾವುದೇ ಆಕಾಂಕ್ಷೆ ಇರಲಿಲ್ಲ. ಆದರೆ ಜೆಡಿಎಸ್ ಮತ್ತು ಬಿಜೆಪಿ ಎಲ್ಲಿ ಒಂದಾಗಿಬಿಡುತ್ತವೆಯೋ ಎಂಬ ಭಯದಿಂದ ದೆಹಲಿಯಿಂದ ಓಡೋಡಿ ಬಂದ ಕಾಂಗ್ರೆಸ್ ನಾಯಕರು ದೇವೇಗೌಡರ ಮನೆ ಬಾಗಿಲಿಗೆ ಬಂದು ಕಾಡಿಬೇಡಿ ಮೈತ್ರಿ ಸರ್ಕಾರ ರಚಿಸಿದರು. ಅಂದು ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಮುಖ್ಯಮಂತ್ರಿ ಮಾಡಿ ಎಂದು ಸ್ವತಃ ದೇವೇಗೌಡರು ಸಲಹೆ ನೀಡಿದ್ದರೂ ಸಹ, ಕಾಂಗ್ರೆಸ್ ನಾಯಕರು ತಮ್ಮ ಅನಿವಾರ್ಯತೆಗಾಗಿ ಬಲವಂತವಾಗಿ ನನ್ನನ್ನು ಮುಖ್ಯಮಂತ್ರಿ ಮಾಡಿದರು ಎಂಬ ಸ್ಫೋಟಕ ಸತ್ಯವನ್ನು ಬಿಚ್ಚಿಟ್ಟರು.
ಮನೆ ಬಾಗಿಲಿಗೆ ಬಿಲ್ ಪಾವತಿ ವರ್ಸಸ್ 39,000 ಕೋಟಿ ರೂ. ಬಾಕಿ; 90 ದಿನಗಳ ಬಸ್ ಯಾತ್ರೆಯ ನೋವು
ತಮ್ಮ ಆಡಳಿತಾವಧಿಯನ್ನು ನೆನಪಿಸಿಕೊಂಡ ಕುಮಾರಸ್ವಾಮಿ, ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಯಾವುದೇ ಗುತ್ತಿಗೆದಾರರಿಂದ ಒಂದು ಪೈಸೆ ಪರ್ಸೆಂಟೇಜ್ ಕೇಳದೆ, ಪ್ರತಿ ತಿಂಗಳ 3ನೇ ತಾರೀಖಿನಂದು ಗುತ್ತಿಗೆದಾರರ ಮನೆ ಬಾಗಿಲಿಗೆ ಬಿಲ್ ಪಾವತಿಯಾಗುತ್ತಿತ್ತು. ಆದರೆ ಇಂದಿನ ಸರ್ಕಾರ ಬರೋಬ್ಬರಿ 39,000 ಕೋಟಿ ರೂಪಾಯಿ ಗುತ್ತಿಗೆದಾರರ ಬಾಕಿ ಬಿಲ್ ಉಳಿಸಿಕೊಂಡಿದ್ದು, ಗುತ್ತಿಗೆದಾರರು ಬೀದಿಯಲ್ಲಿ ನಿಂತು ಕಣ್ಣೀರು ಹಾಕುವ ದುಸ್ಥಿತಿ ನಿರ್ಮಾಣವಾಗಿದೆ ಎಂದರು. ಇನ್ನು ಕಳೆದ ವಿಧಾನಸಭಾ ಚುನಾವಣೆಯ ವೇಳೆ ಸತತ 90 ದಿನಗಳ ಕಾಲ ನಾನು ಮನೆಗೆ ಹೋಗದೆ, ಬಸ್ಸಿನಲ್ಲಿಯೇ ಮಲಗಿ, ಅಲ್ಲಿಯೇ ಸ್ನಾನ ಮಾಡಿ ಇಡೀ ರಾಜ್ಯ ಸುತ್ತಿದ್ದೆ. ಆದರೆ ರಾಜ್ಯದ ಜನತೆ ನಮಗೆ ಕೇವಲ 17 ಸ್ಥಾನಗಳನ್ನು ಮಾತ್ರ ನೀಡಿ ಆಶೀರ್ವದಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.
ಯಾವ ರೈತರ ಭೂಮಿಗೆ ಧೋಖಾ ಮಾಡಿದ್ದೇನೆ? ಬಾಂಬೆ-ಹೈದರಾಬಾದ್ ಬಂಡವಾಳ ಬಿಚ್ಚಲಾ?
ಬಲಿತ ದಲಿತ ಪದ ಬಳಕೆಯನ್ನು ಸಮರ್ಥಿಸಿಕೊಂಡ ಅವರು, ಚಿ.ನಾ. ರಾಮು ಅವರು ಬರೆದಿರುವ ಬಲಿತ ದಲಿತ ತುಳಿತ; ನನ್ನ ಜನ ಅನಾಥ ಪುಸ್ತಕವನ್ನು ಕಾಂಗ್ರೆಸ್ಸಿಗರು ಮೊದಲು ಓದಲಿ. ಕಳೆದ 78 ವರ್ಷಗಳಲ್ಲಿ ದುರ್ಬಲ ದಲಿತರ ಮೀಸಲಾತಿ ಸೌಲಭ್ಯವನ್ನು ನುಂಗಿ, ಬಡ ದಲಿತರನ್ನು ಇನ್ನೂ ಕೈಯೊಡ್ಡುವ ಸ್ಥಿತಿಯಲ್ಲೇ ಇಟ್ಟವರು ಯಾರು ಎಂಬ ವಿವರ ಅದರಲ್ಲಿದೆ. ಧ್ವನಿ ಇಲ್ಲದ ದಲಿತರನ್ನು ಮೇಲೆತ್ತಿ ಎಂದು ಹೇಳಿದ್ದು ತಪ್ಪೇ ಎಂದು ಪ್ರಶ್ನಿಸಿದರು.
ಇನ್ನು ತಮ್ಮ ಮೇಲಿನ ರಿಯಲ್ ಎಸ್ಟೇಟ್ ಆರೋಪಕ್ಕೆ ಕೆಂಡಾಮಂಡಲರಾದ ಅವರು, 1983ರಲ್ಲಿ ನಾನು ಸಿನಿಮಾ ರಂಗದಲ್ಲಿದ್ದಾಗ ಖರೀದಿಸಿದ ಜಮೀನು ಬಿಟ್ಟರೆ ಇನ್ಯಾವ ರಿಯಲ್ ಎಸ್ಟೇಟ್ ಮಾಡಿದ್ದೇನೆ? ನಾನು ಯಾವ ರೈತರ ಭೂಮಿಗೆ ಧೋಖಾ ಹಾಕಿ ಕಬಳಿಸಿದ್ದೇನೆ ತೋರಿಸಿ. ನಿಮ್ಮ ಬಂಡವಾಳಗಳೇನು? ಬಾಂಬೆ ಹಾಗೂ ಹೈದರಾಬಾದ್‌ನಲ್ಲಿ ಏನೇನಿದೆ ಎಂಬುದನ್ನು ನಾನು ಬಿಚ್ಚಿಡಬೇಕಾ? ಮೊದಲು ನಿಮ್ಮ ಸರ್ಕಾರದ ಕಾನೂನುಬಾಹಿರ ತೀರ್ಮಾನಗಳ ಕುರಿತು ನಾನು ಕೇಳಿರುವ ಪ್ರಶ್ನೆಗಳಿಗೆ ಉತ್ತರ ಕೊಡಿ, ಆಮೇಲೆ ವೈಯಕ್ತಿಕ ವಿಚಾರ ಚರ್ಚಿಸೋಣ ಎಂದು ಸವಾಲು ಹಾಕಿದರು.







