ಯಾದಗಿರಿ: ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್ಎಸ್ಎಸ್) ಇನ್ನೂ ಅಧಿಕೃತವಾಗಿ ನೋಂದಾಯಿತ ಸಂಘಟನೆಯಾಗಿಲ್ಲ. ದಲಿತ ಸಂಘಟನೆಗಳಾದ ಡಿಎಸ್ಎಸ್ಗಳಿಗೆ ಕಾನೂನುಬದ್ಧ ನೋಂದಣಿ ಇರುವಾಗ, ಮುಂದಿನ ದಿನಗಳಲ್ಲಿ ಆರ್ಎಸ್ಎಸ್ ಸಂಘಟನೆಗೂ ಕಡ್ಡಾಯವಾಗಿ ನೋಂದಣಿ ಮಾಡಿಸಲಿದ್ದೇನೆ ಎಂದು ಗೃಹ, ಐಟಿ-ಬಿಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ. ಆ ಮೂಲಕ ತಮ್ಮ ಮುಂದಿನ ಗುರಿ ಸಂಘ ಪರಿವಾರವೇ ಎಂಬ ನೇರ ಸಂದೇಶವನ್ನು ರವಾನಿಸಿದ್ದಾರೆ.
ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ನಾಯ್ಕಲ್ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಬೃಹತ್ ಕಾರ್ಯಕ್ರಮವನ್ನು ಉದ್ಘಾಟಿಸಿ, 2023-24ನೇ ಸಾಲಿನ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಅಂದಾಜು 31 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭವ್ಯ ಪುತ್ಥಳಿಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
150 ಬಾರಿ ಸಂವಿಧಾನ ವಿರೋಧಿಸಿದ್ದ ಮನುವಾದಿಗಳು; ನಿಜವಾದ ದೇಶದ್ರೋಹಿಗಳು ಯಾರು?
ಇತಿಹಾಸದ ಪುಟಗಳನ್ನು ಮೆಲುಕು ಹಾಕುತ್ತಾ ಸಂಘ ಪರಿವಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ, ಕಳೆದ 1949ರಲ್ಲಿ ಮನುವಾದಿ ಸಂಘಟನೆಗಳು ನಮಗೆ ಸಂವಿಧಾನ ಬೇಡವೇ ಬೇಡ, ಮನುಸ್ಮೃತಿಯೇ ಬೇಕು ಎಂದು ಒತ್ತಾಯಿಸಿ ಬರೋಬ್ಬರಿ 150 ಬಾರಿ ಪ್ರತಿಭಟನೆಗಳನ್ನು ನಡೆಸಿದ್ದವು. ಅಷ್ಟೇ ಅಲ್ಲದೆ, ಆರ್ಎಸ್ಎಸ್ನ ಅಧಿಕೃತ ಮುಖವಾಣಿಯಾದ ಆರ್ಗನೈಸರ್ ಪತ್ರಿಕೆಯಲ್ಲಿ ದೇಶದ ರಾಷ್ಟ್ರಧ್ವಜ ಹಾಗೂ ಸಂವಿಧಾನವನ್ನು ತಾವು ಒಪ್ಪುವುದಿಲ್ಲ ಎಂಬ ನಿಲುವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಲಾಗಿತ್ತು ಎಂದು ವಾಗ್ದಾಳಿ ನಡೆಸಿದರು.
ಆರ್ಎಸ್ಎಸ್ನವರು ಎಂದಾದರೂ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರೇ? ಕ್ವಿಟ್ ಇಂಡಿಯಾ ಚಳವಳಿಯಲ್ಲಾಗಲಿ ಅಥವಾ ದುಂಡುಮೇಜಿನ ಸಭೆಯಲ್ಲಾಗಲಿ ಪಾಲ್ಗೊಂಡಿದ್ದರೇ? ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು ಹತ್ಯೆ ಮಾಡಿದ ವ್ಯಕ್ತಿಯ ಪುತ್ಥಳಿಗೆ ಪೂಜೆ ಸಲ್ಲಿಸುವ ಇವರು, ಆ ಹಂತಕನನ್ನು ದೇಶಪ್ರೇಮಿ ಎಂದು ಕರೆಯುತ್ತಾರೆ. ಹಾಗಾದರೆ ಇವರ ದೃಷ್ಟಿಯಲ್ಲಿ ಮಹಾತ್ಮ ಗಾಂಧೀಜಿ ದೇಶದ್ರೋಹಿಯೇ ಎಂದು ಖಾರವಾಗಿ ಪ್ರಶ್ನಿಸಿದರು.
ಸ್ವತಂತ್ರ ಭಾರತದಲ್ಲಿ ಸಂವಿಧಾನವೇ ಅತ್ಯುನ್ನತ ಶಕ್ತಿಯಾಗಿದೆ. ಸಮಾಜದಲ್ಲಿ ಜಾತಿ ಮತ್ತು ಧರ್ಮಗಳ ನಡುವೆ ದ್ವೇಷದ ವಿಷಬೀಜ ಬಿತ್ತಿ ಸಂಘರ್ಷ ಸೃಷ್ಟಿಸುವವರೇ ನಿಜವಾದ ದೇಶದ್ರೋಹಿಗಳು ಎಂಬ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯವನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಭಗವಾನ್ ಗೌತಮ ಬುದ್ಧರ ಕಾಲದಿಂದ 2,500 ವರ್ಷಗಳು, ವಿಶ್ವಗುರು ಬಸವಣ್ಣನವರ ಕಾಲದಿಂದ ಸುಮಾರು 900 ವರ್ಷಗಳು ಹಾಗೂ ಸಂವಿಧಾನ ಜಾರಿಗೆ ಬಂದು 75 ವರ್ಷಗಳು ಉರುಳಿವೆ. ಆದರೂ ಸಮಾಜದಲ್ಲಿ ಇನ್ನೂ ಸಮಾನತೆ ಮತ್ತು ಸಾಮಾಜಿಕ ಬದಲಾವಣೆಯ ಕುರಿತು ಮಾತನಾಡುವ ಪರಿಸ್ಥಿತಿ ಇರುವುದು ವಿಪರ್ಯಾಸ. ಸ್ವಾಭಿಮಾನದ ಸಮಾಜ ನಿರ್ಮಾಣವಾಗಲು ಕೇವಲ ಮಹನೀಯರ ಪ್ರತಿಮೆಗಳನ್ನು ಸ್ಥಾಪಿಸಿದರೆ ಸಾಲದು, ಅವರ ತತ್ವ ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ನನ್ನ ಸೂಟು-ಬೂಟು ಸಮಸ್ಯೆಯಲ್ಲ, ನನ್ನ ಘರ್ಜನೆಯೇ ಬಿಜೆಪಿಗೆ ದೊಡ್ಡ ಸಮಸ್ಯೆ!
ವ್ಯಕ್ತಿಪೂಜೆಯನ್ನು ತಾವು ಎಂದಿಗೂ ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದ ಪ್ರಿಯಾಂಕ್ ಖರ್ಗೆ, ನಾನು ವೇದಿಕೆಗಳಲ್ಲಿ ಹಾರ, ಶಾಲು ಅಥವಾ ತುರಾಯಿಗಳನ್ನು ಸ್ವೀಕರಿಸುವುದಿಲ್ಲ. ಅದರ ಬದಲಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವಂತೆ ಮನವಿ ಮಾಡುತ್ತೇನೆ. ಹಾಗೆ ಸಂಗ್ರಹವಾದ ಪುಸ್ತಕಗಳನ್ನು ಗ್ರಾಮೀಣ ಭಾಗದ ಅರಿವು ಕೇಂದ್ರಗಳಿಗೆ ನೀಡಲಾಗುತ್ತದೆ. ಜೆಸಿಬಿ ಯಂತ್ರಗಳ ಮೂಲಕ ಬೃಹತ್ ಹಾರ ಹಾಕುವುದು ಹಾಗೂ ಎಲ್ಲೆಡೆ ದೊಡ್ಡ ಪೋಸ್ಟರ್ಗಳನ್ನು ಕಟ್ಟುವುದು ಮುಖ್ಯವಲ್ಲ. ಶಿಕ್ಷಣ ಪಡೆದ ಯುವಜನತೆ ವೈಜ್ಞಾನಿಕ ಚಿಂತನೆ ಬೆಳೆಸಿಕೊಂಡು ಅನ್ಯಾಯದ ವಿರುದ್ಧ ಪ್ರಶ್ನಿಸಬೇಕು ಎಂದರು.
ಇದೇ ವೇಳೆ ತಮ್ಮ ವಿರುದ್ಧದ ವೈಯಕ್ತಿಕ ಟೀಕೆಗಳಿಗೆ ತಿರುಗೇಟು ನೀಡಿದ ಅವರು, ಬಿಜೆಪಿಯವರಿಗೆ ನನ್ನ ಸೂಟು ಮತ್ತು ಬೂಟು ಸಮಸ್ಯೆಯಲ್ಲ; ಬದಲಾಗಿ ಅವರಿಗೆ ನನ್ನ ಘರ್ಜನೆಯೇ ದೊಡ್ಡ ಸಮಸ್ಯೆಯಾಗಿದೆ ಎಂದು ಗುಡುಗಿದರು. ವಿಶ್ವದ ನಾಲ್ಕನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ (ಐಟಿ) ಕೇಂದ್ರವನ್ನು ದಲಿತ ಸಮುದಾಯದ ವ್ಯಕ್ತಿಯೊಬ್ಬರು ಮುನ್ನಡೆಸುತ್ತಿದ್ದಾರೆ ಎಂಬುದನ್ನು ಅರಗಿಸಿಕೊಳ್ಳಲು ಕೆಲವರಿಗೆ ಸಾಧ್ಯವಾಗುತ್ತಿಲ್ಲ. ಬಿಜೆಪಿ ನಾಯಕ ಸುನೀಲ್ ಕುಮಾರ್ ಅವರು ನನ್ನನ್ನು ಕಾನ್ವೆಂಟ್ ದಲಿತ ಎಂದು ಟೀಕಿಸುತ್ತಾರೆ. ಮತ್ತೊಬ್ಬರು ನನ್ನ ತಂದೆ ನನಗೆ ಒಂದು ಲೋಟ ಹಾಲು ಹೆಚ್ಚಾಗಿ ಕುಡಿಸಿದ್ದಾರೆ ಎನ್ನುತ್ತಾರೆ. ನಮ್ಮ ತಂದೆ ನಮಗೆ ಹೆಚ್ಚು ಹಾಲು ನೀಡಿದ್ದರೆ ಇವರಿಗೇಕೆ ಇಷ್ಟೊಂದು ಹೊಟ್ಟೆಕಿಚ್ಚು? ದಲಿತರು ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೇರಬಾರದೇ? ಸಂಸತ್ತಿನ ನೂತನ ಕಟ್ಟಡದ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸದಿರುವುದು ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಜಾಗವನ್ನು ತೊಳೆದು ಸ್ವಚ್ಛಗೊಳಿಸುವುದು ಇವರ ಯಾವ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ತರಾಟೆಗೆ ತೆಗೆದುಕೊಂಡರು.
ಚಲುವಾದಿಗಳಾಗಿ ಬೆಳೆದು ಮನುವಾದಿಗಳಾಗುತ್ತಿರುವುದು ಆತಂಕಕಾರಿ; ಸಾವರ್ಕರ್ ಪತ್ರದ ದಾಖಲೆ ಪ್ರಸ್ತಾಪ
ಡಾ. ಬಿ.ಆರ್. ಅಂಬೇಡ್ಕರ್ ಅವರ ಅಪಾರ ಕೊಡುಗೆಗಳನ್ನು ಸ್ಮರಿಸಿದ ಸಚಿವರು, ಸ್ವತಂತ್ರ ಭಾರತದ ಮೊದಲ ಸಚಿವ ಸಂಪುಟದಲ್ಲಿ ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರದ ಆಳವಾದ ಜ್ಞಾನ ಹೊಂದಿದ್ದ ಏಕೈಕ ವ್ಯಕ್ತಿ ಅಂಬೇಡ್ಕರ್ ಆಗಿದ್ದರು. ಅವರ ದಿ ಪ್ರಾಬ್ಲಂ ಆಫ್ ದಿ ರೂಪೀ ಕೃತಿ ಹಾಗೂ ಆರ್ಥಿಕ ಚಿಂತನೆಗಳೇ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸ್ಥಾಪನೆಗೆ ಬುನಾದಿಯಾದವು. ಕಾರ್ಮಿಕ ಕಾನೂನುಗಳು, ಕನಿಷ್ಠ ವೇತನ, ಭವಿಷ್ಯ ನಿಧಿ ಹಾಗೂ ಮಹಿಳೆಯರಿಗೆ ಆಸ್ತಿ ಹಕ್ಕು ನೀಡುವಲ್ಲಿ ಅವರು ಐತಿಹಾಸಿಕ ಪಾತ್ರ ವಹಿಸಿದ್ದಾರೆ. ವಿವಿಧ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ 2 ವರ್ಷ, 11 ತಿಂಗಳು, 18 ದಿನಗಳ ಕಠಿಣ ಪರಿಶ್ರಮದ ಬಳಿಕ ದೇಶಕ್ಕೆ ಸಂವಿಧಾನ ನೀಡಿದರು ಎಂದರು.
ಯುವಕರು ವಾಟ್ಸ್ಆ್ಯಪ್ ವಿಶ್ವವಿದ್ಯಾಲಯದ ಸುಳ್ಳು ಮಾಹಿತಿಯನ್ನೇ ನಂಬಿ ಚರ್ಚೆ ಮಾಡಬಾರದು. ಇಂದು ಕೆಲವರು ಚಲುವಾದಿಗಳಾಗಿ ಬೆಳೆದು ಮನುವಾದಿಗಳಾಗುತ್ತಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ ಎಂದು ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಸದನದಲ್ಲಿ ಬಿಜೆಪಿಗರು ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಿತು ಎಂದು ಆರೋಪಿಸಿದ್ದರು. ಆದರೆ, ತಮ್ಮ ಸೋಲಿಗೆ ಆರ್ಎಸ್ಎಸ್ನ ವೀರ ಸಾವರ್ಕರ್ ಅವರೇ ಕಾರಣ ಎಂದು ಸ್ವತಃ ಅಂಬೇಡ್ಕರ್ ಅವರೇ ಬರೆದಿದ್ದ ಪತ್ರದ ದಾಖಲೆಯನ್ನು ನಾನು ಸದನದಲ್ಲಿ ಮಂಡಿಸಿದ್ದೇನೆ. ಆ ಪತ್ರವು ರಾಷ್ಟ್ರೀಯ ದಾಖಲೆ ಸಂಗ್ರಹಾಗಾರದಲ್ಲಿದ್ದು, ಅದನ್ನು ಸ್ವತಃ ಪ್ರಧಾನಿ ಮೋದಿಯವರೇ ಡಿಜಿಟಲೀಕರಣ ಮಾಡಿದ್ದಾರೆ. ಇನ್ನು ಕೇಂದ್ರ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಅಂಬೇಡ್ಕರ್ ಹೆಸರನ್ನು ಉಲ್ಲೇಖಿಸಿದ ರೀತಿಯೂ ಅವಮಾನಕರವಾಗಿತ್ತು. ಇಂತಹ ಮನುವಾದಿಗಳ ವಿರುದ್ಧ ನನ್ನ ಹೋರಾಟ ನಿರಂತರವಾಗಿದ್ದು, ಜನರ ಆಶೀರ್ವಾದ ಇರುವವರೆಗೆ ಒಂದು ಹೆಜ್ಜೆಯೂ ಹಿಂದೆ ಇಡುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಘೋಷಿಸಿದರು.








