ಆಷಾಡ ಮಾಸದ ಮೊದಲ ಶುಕ್ರವಾರ – ನಾಡದೇವಿಯ ದರ್ಶನಕ್ಕೆ ಹರಿದು ಬಂದ ಜನಸಾಗರ
ಇಂದು ಆಷಾಢ ಮಾಸ ಮೊದಲ ಶುಕ್ರವಾರ ಪ್ರಯುಕ್ತ ನಾಡದೇವತೆ ಚಾಮುಂಡಿ ದೇವಿಯ ದರ್ಶನ ಪಡೆಯಲು ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಆಷಾಡ ಮಾಸದ ಶುಕ್ರವಾರದಂದು ಚಾಮುಂಡಿ ತಾಯಿಯ ದರ್ಶನ ಮಾಡಿದರೆ ಒಳ್ಳೆಯದಾಗುತ್ತೆ ಎಂಬ ಭಾವನೆ ಇರುವುದರಿಂದ ಈ ಮಾಸದಲ್ಲಿ ಹೆಚ್ಚಿನ ಜನಸಂಖೆಯಲ್ಲಿ ಜನರು ಹರಿದುಬರಲಿದ್ದಾರೆ.
ಭಕ್ತರ ಅನುಕೂಲಕ್ಕಾಗಿ ಚಾಮುಂಡಿ ಬೆಟ್ಟದಲ್ಲಿ ಸಕಲ ವ್ಯವಸ್ಥೆಗಳು ಆಗಿವೆ. ಭಕ್ತರಿಗೆ ಮೂರು ಸಾಲಿನಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರತ್ಯೇಕ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಮಳೆ-ಬಿಸಿಲು ರಕ್ಷಣೆಗೆ ಟೆಂಟ್ ನಿರ್ಮಿಸಲಾಗಿದೆ. ಮುಂಜಾನೆ 5.30ರಿಂದ ರಾತ್ರಿ 9.30ರವರೆಗೆ ದರ್ಶನಕ್ಕೆ ಅವಕಾಶವಿದೆ.
ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಾಯಿ ಚಾಮುಂಡಿ ದರ್ಶನಕ್ಕೆ ಬರುವ ಭಕ್ತರಿಗೆ ಎರಡು ಡೋಸ್ ಕೊರೋನಾ ಲಸಿಕೆ ಕಡ್ಡಾಯಗೊಳಿಸಲಾಗಿದೆ. ಇಲ್ಲದಿದ್ದರೆ 72 ಗಂಟೆ ಮುಂಚಿತವಾದ ಕೋವಿಡ್ ನೆಗೆಟಿವ್ ರೀಪೋರ್ಟ್ ಇರಬೇಕು. ಹಾಗಿದ್ರೆ ಮಾತ್ರ ಚಾಮುಂಡಿ ಬೆಟ್ಟ ಪ್ರವೇಶಕ್ಕೆ ಅವಕಾಶ ಇರಲಿದೆ.
ದೇವಸ್ಥಾನದ ಮುಂಭಾಗ ಬೆಳಗ್ಗೆ 6.30 ರಿಂದ ರಾತ್ರಿ 8.30 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಟ್ಟದಲ್ಲಿನ ಮಹಿಷಾಸುರ ಪ್ರತಿಮೆ ಆವರಣದಲ್ಲಿ ದಾನಿಗಳು ಭಕ್ತರಿಗೆ ಬಾಳೆಲೆ ಊಟಕ್ಕೆ ವ್ಯವಸ್ಥೆ ಮಾಡಿದ್ದಾರೆ. ಪ್ರಸಾದ ರೂಪದಲ್ಲಿ ಹಾರ್ಲಿಕ್ಸ್, ಮೈಸೂರು ಪಾಕ್ ವಿತರಣೆ ಮಾಡಲು ಶ್ರೀಚಾಮುಂಡೇಶ್ವರಿ ಸೇವಾ ಸಮಿತಿ ಮುಂದಾಗಿದೆ.
ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ಇದೆ. ಭಕ್ತರು ಲಲಿತ್ ಮಹಲ್ ಬಳಿಯ ಮೈದಾನದಲ್ಲಿ ತಮ್ಮ ವಾಹನ ನಿಲ್ಲಿಸಿ, ಉಚಿತವಾಗಿ ಬಸ್ನಲ್ಲಿ ಬೆಟ್ಟಕ್ಕೆ ಹೋಗುವ ವ್ಯವಸ್ಥೆ ಮಾಡಲಾಗಿದೆ.