ಧಾರವಾಡ ಅಪಘಾತ – ಸಂತ್ರಸ್ತ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ
9 ಜನರ ಸಾವಿಗೆ ಕಾರಣವಾದ ಧಾರವಾಡ ಭೀಕರ ಅಪಘಾತಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಪರಿಹಾರ ಘೋಷಣೆ ಮಾಡಿದ್ದಾರೆ. ಸಂತ್ರಸ್ಥ ಕುಟುಂಬಗಳಿಗೆ ತಲಾ 5 ಲಕ್ಷ ರೂ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಈ ಕುರಿತು ಟ್ವೀಟರ್ ನಲ್ಲಿ ಮಾಹಿತಿ ನೀಡಿರುವ ಮುಖ್ಯಮಂತ್ರಿಗಳು “ಧಾರವಾಡದ ಬಾಡ ಗ್ರಾಮದ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ 9 ಜನರ ಕುಟುಂಬಗಳಿಗೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಅವರ ಮನವಿಯ ಮೇರೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ ರೂ. 5 ಲಕ್ಷ ಪರಿಹಾರ ನೀಡಲಾಗುವುದು. ಈ ಅಪಘಾತ ಅತ್ಯಂತ ದುರದೃಷ್ಟಕರವಾಗಿದ್ದು, ಮೃತಪಟ್ಟ ಎಲ್ಲರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.
ನಿಶ್ಚಿತಾರ್ಥ ಮುಗಿಸಿಕೊಂಡು ಹೊರಟಿದ್ದ ವಾಹನವೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡಿರುವ ಘಟನೆ ಧಾರವಾಡದಲ್ಲಿ ನಡೆದಿತ್ತು.
ಧಾರವಾಡ ತಾಲೂಕಿನ ಬಾಡ ಗ್ರಾಮದ ಬಳಿ ಈ ಅಫಘಾತ ಸಂಭವಿಸಿದೆ. ತಡರಾತ್ರಿ 2 30 ಗಂಟೆ ಸುಮಾರಿಗೆ ವೇಗವಾಗಿ ಪ್ರಯಾಣಿಸುತ್ತಿದ್ದ ಕ್ರೂಸರ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಹೊಡೆದು 9 ಮಂದಿ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರನ್ನು ಅನನ್ಯ (14), ಹರೀಶ (13), ಶಿಲ್ಪಾ (34), ನೀಲವ್ಚ (60), ಮಧುಶ್ರೀ (20) ಮಹೇಶ್ವರಯ್ಯ (11), ಶಂಭುಲಿಂಗಯ್ಯ (35), ಎಂದು ಗುರುತಿಸಲಾಗಿದೆ.
ಮನಸೂರ ಗ್ರಾಮದಿಂದ ನಿಗದಿ (ಬೆನಕನಕಟ್ಟಿ) ಗೆ ಹೋಗುವಾಗ ಈ ದುರ್ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ವಾಹನ ಮರಕ್ಕೆ ಡಿಕ್ಕಿ ಸಂಭವಿಸಿದೆ ಎನ್ನಲಾಗಿದ್ದು, ಗಂಭೀರ ಗಾಯಗೊಂಡ ಗಾಯಾಳುಗಳನ್ನು ಜಿಲ್ಲಾಸ್ಪತ್ರೆ ಮತ್ತು ಕಿಮ್ಸ್‌ಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ.