ಕೊಲಂಬೊ: ಶ್ರೀಲಂಕಾ ವಿರುದ್ಧ ಭಾರತೀಯ ಕ್ರಿಕೆಟ್ ತಂಡ ಮೂರನೇ ಟಿ20 ಪಂದ್ಯವನ್ನು ಕೂಡ ಗೆದ್ದಿದೆ. ಸೂಪರ್ ಓವರ್‌ನ ಮೊದಲ ಎಸೆತದಲ್ಲೇ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಬೌಂಡರಿಯೊಂದಿಗೆ ಲಂಕಾ ವಿರುದ್ಧ ಭಾರತ ರೋಚಕ ಗೆಲುವು ಕಂಡಿದೆ. ಈ ಮೂಲಕ ಭಾರತ ತಂಡ ಲಂಕಾ ತವರಿನಲ್ಲಿ ಕ್ಲೀನ್ ಸ್ವೀಪ್ ನೊಂದಿಗೆ ಸರಣಿ ಬಾಚಿಕೊಂಡಿದೆ.
ಗೆಲುವಿಗೆ ಕೇವಲ 138 ರನ್ ಗುರಿ ಪಡೆದಿದ್ದ ಲಂಕಾ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 137 ರನ್ ಗಳಿಸಿ ಮ್ಯಾಚ್ ಟೈ ಆಗುವಂತೆ ಮಾಡಿತು. ಹೀಗಾಗಿ ಪಂದ್ಯ ಸೂಪರ್ ಓವರ್ ಗೆ ತಿರುಗಿತು. ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ತಂಡ 2 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು. ಗುರಿ ತಲುಪಲು ಕಣಕ್ಕೆ ಇಳಿದ ಭಾರತ ತಂಡ ನಾಯಕ ಸೂರ್ಯಕುಮಾರ್, ಮಹೀಶ್ ತೀಕ್ಷಣ ಬೌಲಿಂಗ್‌ನಲ್ಲಿ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸುವುದರ ಮೂಲಕ ಗೆಲುವಿನ ನಗೆ ಬೀರುವಂತೆ ಮಾಡಿದರು.
138 ರನ್ ಗುರಿ ಬೆನ್ನಟ್ಟಿದ್ದ ಲಂಕಾಗೆ ಕೊನೆಯ 2 ಓವರ್ ಗಳಲ್ಲಿ 9 ರನ್ ಬೇಕಿತ್ತು. ಆದರೆ 19ನೇ ಓವರ್ ಬೌಲಿಂಗ್ ಮಾಡಿದ ರಿಂಕು ಸಿಂಗ್ ಪಂದ್ಯದ ದಿಕ್ಕನ್ನೇ ಬದಲಾಯಿಸಿದರು. ಆ ಓವರ್ ನಲ್ಲಿ ರಿಂಕು ಸಿಂಗ್ 2 ಪ್ರಮುಖ ವಿಕೆಟ್ ಕಿತ್ತು, ಕೇವಲ 3 ರನ್ ನೀಡಿದರು. ಹೀಗಾಗಿ ಕೊನೆಯ ಓವರ್ ನಲ್ಲಿ ಗೆಲ್ಲಲು 6 ರನ್ ಬೇಕಾಯಿತು. ಈ ವೇಳೆ ನಾಯಕ ಸೂರ್ಯಕುಮಾರ್ ಯಾದವ್ ಬೌಲ್ ಹಿಡಿದರು. ಎರಡು ಹಾಗೂ ಮೂರನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಿತ್ತರು. 4ನೇ ಎಸೆತದಲ್ಲಿ 1 ರನ್, 5ನೇ ಎಸೆತದಲ್ಲಿ ರನೌಟ್ ಗೆ ಅವಕಾಶವಿದ್ದರೂ ಗಲಿಬಿಲಿಗೊಂಡು 2 ರನ್ ನೀಡಿದರು. ಕೊನೆಯ ಎಸೆತದಲ್ಲಿ ಲಂಕಾ ಆಟಗಾರರು 2 ಕದ್ದ ಪರಿಣಾಮ ಮ್ಯಾಚ್ ಸೂಪರ್ ಓವರ್ ತಲುಪಿತು.
ಸೂಪರ್ ಓವರ್ ನಲ್ಲಿ ಪ್ರತಿಯೊಂದು ತಂಡ ಮೂವರು ಬ್ಯಾಟ್ಸಮೆನ್ ಹಾಗೂ ಓರ್ವ ಬೌಲರ್ ನನ್ನು ಆಯ್ಕೆ ಮಾಡಬೇಕು. ಇಬ್ಬರು ಆಟಗಾರರು ಔಟ್ ಆದರೆ, ತಂಡ ಆಲೌಟ್ ಆದಂತೆ. ಈ ಓವರ್ ನಲ್ಲಿ ಅತ್ಯಧಿಕ ರನ್ ಗಳಿಸಿರುವ ತಂಡ ಗೆಲ್ಲುತ್ತದೆ. ಇದಕ್ಕೂ ಮುನ್ನ ಭಾರತದ ಅಲ್ಪಮೊತ್ತದ ಟಾರ್ಗೆಟ್ ಬೆನ್ನಟ್ಟಿದ ಶ್ರೀಲಂಕಾ ತಂಡದ ಪರ ಪಥುಮ್ ನಿಸ್ಸಾಂಕ 26ರನ್, ಕುಸಲ್ ಮೆಂಡಿಸ್ 43 ರನ್, ಕುಸಲ್ ಪೆರೆರಾ 46 ರನ್ ಗಳಿಸಿದ್ದರು. ನಂತರ ಭಾರತೀಯ ಬೌಲರ್ ಗಳು ತಂಡದ ಮೇಲೆ ಹಿಡಿತ ಸಾಧಿಸಿದರು. ಪರಿಣಾಮ ಭಾರತ ತಂಡ ಗೆಲ್ಲುವಂತಾಯಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡದ ಪರ ಜೈಸ್ವಾಲ್ 10 ರನ್, ಶುಭಮನ್ ಗಿಲ್ 39 ರನ್, ಶಿವಂ ದುಬೆ 13 ರನ್, ಸೂರ್ಯ 8 ರನ್, ರಿಂಕು ಸಿಂಗ್ 1 ರನ್, ರಿಯಾನ್ ಪರಾಗ್ 26 ರನ್, ವಾಷಿಂಗ್ಟನ್ ಸುಂದರ್ 25 ರನ್ ಹಾಗೂ ರವಿ ಬಿಷ್ಣೋಯಿ 8 ರನ್ ಗಳಿಸಿದರು.








