ಮಧ್ಯಪ್ರದೇಶದ ಸರ್ಕಾರವನ್ನು ಉಳಿಸಲು ಕಾಂಗ್ರೆಸ್ ನಾಯಕರು ಹರಸಾಹಸ ಪಡುತ್ತಿದ್ದಾರೆ. ಆಪರೇಷನ್ ಕಮಲಕ್ಕೆ ಒಳಗಾಗಿರುವ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರು ಬೆಂಗಳೂರಿನ ಯಲಹಂಕ ಬಳಿ ಇರುವ ರಮಡ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಹಾಗಾಗಿ ಅವರನ್ನು ಮನವೊಲಿಸಲು ಕಾಂಗ್ರೆಸ್ ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಬಂದಿದ್ದರು.
ಮಧ್ಯ ಪ್ರದೇಶದ ಬಂಡಾಯ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಲು ದಿಗ್ವಿಜಯ್ ಸಿಂಗ್ ಅವರಿಗೆ ಪೊಲೀಸರು ಅವಕಾಶ ಮಾಡಿಕೊಡಲಿಲ್ಲ. ಕೂಡಿಹಾಕಿರುವ ಕಾಂಗ್ರೆಸ್ ಶಾಸಕಕನ್ನು ಭೇಟಿ ಮಾಡಲು ಅವಕಾಶ ನೀಡುವವರೆಗೆ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ. ಬಿಜೆಪಿಯ ಸೆರೆಯಲ್ಲಿರುವ ಶಾಸಕರನ್ನು ಭೇಟಿ ಮಾಡಲು ಅವಕಾಶ ನೀಡಬೇಕು ಎಂದು ಮಧ್ಯ ಪ್ರದೇಶದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಲು ದಿಗ್ವಿಜಯ್ ಸಿಂಗ್ ಮುಂದಾಗಿದ್ದರು. ಇದಕ್ಕಾಗಿ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದರು. ಆದರೆ ಪೊಲೀಸರು ಮನವಿಯನ್ನು ನಿರಕಾರಿಸಿದ್ದಾರೆ. ಆ ಕಾರಣಕ್ಕಾಗಿ ದಿಗ್ವಿಜಯ್ ಸಿಂಗ್ ರೆಸಾರ್ಟ್ ಹೊರಗೆ ಕೆಲ ಕಾಂಗ್ರೆಸ್ ಮುಖಂಡರ ಜೊತೆ ಸೇರಿ ಧರಣಿ ನಡೆಸಿದರು. ಈ ಸಂದರ್ಭದಲ್ಲಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ನಾಯಕರನ್ನು ವಶಕ್ಕೆ ತೆಗೆದುಕೊಂಡು ಪೊಲೀಸ್ ಠಾಣೆಗೆ ಕರೆದೊಯ್ದರು.
ಪೊಲೀಸರು ದಿಗ್ವಿಜಯ್ ಸಿಂಗ್ ಅವರನ್ನು ವಶಕ್ಕೆ ಪಡೆಯುವ ಮುನ್ನ ಮಾತನಾಡಿದ ಅವರು, ಪೊಲೀಸರು ನಮ್ಮ ಶಾಸಕರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡದಿದ್ದರೆ ನಾನು ಉಪವಾಸ ಕೂರುತ್ತೇನೆ, ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದ್ದೇವೆ, ಸರ್ವಾಧಿಕಾರ ದೇಶದಲ್ಲಲ್ಲ. ಹತ್ತು ದಿನಗಳ ಹಿಂದೆ ಬೆಂಗಳೂರಿಗೆ ಬಂದವರು ಮಧ್ಯ ಪ್ರದೇಶಕ್ಕೆ ವಾಪಸ್ಸಾಗುತ್ತಾರೆ ಎಂದುಕೊಂಡಿದ್ದೆವು. ಆದರೆ ಅವರನ್ನು ಇಲ್ಲಿ ಬಿಜೆಪಿ ನಾಯಕರು ಬಂಧನ ರೀತಿಯಲ್ಲಿ ಇಟ್ಟುಕೊಂಡಿದ್ದಾರೆ. ಅವರ ಕುಟುಂಬದವರು ನಮಗೆ ಸಂದೇಶ ಮಾಡುತ್ತಿರುತ್ತಾರೆ. ನಾನೇ ಖುದ್ದಾಗಿ 5 ಶಾಸಕರಲ್ಲಿ ಇಲ್ಲಿಗೆ ಬಂದ ಸಂದರ್ಭದಲ್ಲಿ ಮಾತನಾಡಿದ್ದೆ. ಅವರನ್ನು ಇಲ್ಲಿ ಸೆರೆಯಲ್ಲಿರಿಸಲಾಗಿದೆ ಎಂದು ಹೇಳಿದ್ದಾರೆ, ಅವರ ಬಳಿಯಿಂದ ಫೋನ್ ಕಿತ್ತುಕೊಂಡಿದ್ದಾರೆ. ಅವರು ವಾಸ್ತವ್ಯವಿರುವ ಪ್ರತಿ ಕೋಣೆಯ ಎದುರು ಪೊಲೀಸರನ್ನು ನಿಯೋಜಿಸಲಾಗಿದೆ. ಹಗಲು-ರಾತ್ರಿ ಅವರನ್ನು ಕಾಯಲಾಗುತ್ತಿದೆ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದು ಎಂತಹ ಕ್ರಮ ಎಂದು ಪ್ರಶ್ನಿಸಿದರು.
ನಾನು ಮಧ್ಯ ಪ್ರದೇಶದಿಂದ ರಾಜ್ಯಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ಈ ತಿಂಗಳ 26ರಂದು ಚುನಾವಣೆ ನಡೆಯುತ್ತಿದೆ. ನಮ್ಮ ಶಾಸಕರನ್ನು ಇಲ್ಲಿ ಸೆರೆಯಲ್ಲಿಡಲಾಗಿದೆ. ಅವರಲ್ಲಿ ನಾನು ಮಾತನಾಡಬೇಕು. ಶಾಸಕರಿಗೆ ಜೀವ ಬೆದರಿಕೆಯಿರುವುದರಿಂದ ಮಾತನಾಡಲು ಅವಕಾಶ ಕೊಡುವುದಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ ಎಂದರು.









