ಅಥಣಿ : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾಡಿರುವ ಫೋನ್ ಟ್ಯಾಪಿಂಗ್ ಆರೋಪ ಶುದ್ಧ ಸುಳ್ಳು ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ಅಥಣಿಯಲ್ಲಿ ಡಿಕೆಶಿಯ ಫೋನ್ ಟ್ಯಾಪಿಂಗ್ ಆರೋಪದ ಬಗ್ಗೆ ಮಾತನಾಡಿದ ಅವರು, ಡಿ ಜೆ ಹಳ್ಳಿ, ಕೆ ಜಿ ಹಳ್ಳಿ ಗಲಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತೊಡಗಿರುವುದರಿಂದ ತಮ್ಮ ಮೇಲೆ ಬಂದಿರುವ ಆರೋಪವನ್ನು ಮರೆಮಾಚಿ, ಜನರ ಗಮನ ಬೇರೆಡೆ ಸೆಳೆಯಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಫೋನ್ ಟ್ಯಾಪಿಂಗ್ ಬಗ್ಗೆ ಹೇಳುತ್ತಿದ್ದಾರೆ. ಅವರ ಫೋನ್ ಟ್ಯಾಪಿಂಗ್ ಮಾಡುವ ಅವಶ್ಯಕತೆ ಸರ್ಕಾರಕ್ಕೆ ಇಲ್ಲ. ಡಿ ಕೆ ಶಿವಕುಮಾರ್ ಅವರ ಆರೋಪ ಶುದ್ಧ ಸುಳ್ಳು ಎಂದು ಡಿಸಿಎಂ ಸವದಿ ಟಾಂಗ್ ನೀಡಿದರು.
ಇದೇ ವೇಳೆ ಮಿಸ್ಟರ್ ಕಮಿಷನರ್ ಬಿ ಕೇರ್ ಪುಲ್ ಎಂಬ ಡಿಕೆಶಿ ಎಚ್ಚರಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ, ಪೊಲೀಸ್ ಕಮೀಷನರ್ ಗೆ ಧಮ್ಕಿ ಹಾಕಿರುವುದು ಡಿ ಕೆ ಶಿವಕುಮಾರ್ ಅವರ ಸಂಸ್ಕೃತಿಯನ್ನು ಸಮಾಜಕ್ಕೆ ಎತ್ತಿ ತೋರಿಸುತ್ತದೆ. ಒಬ್ಬ ಪೊಲೀಸ್ ಅಧಿಕಾರಿ ನಿಷ್ಠೆಯಿಂದ ಕೆಲಸ ಮಾಡುವ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕರಾಗಿರುವವರು ಅದರ ಜೊತೆಗೆ ಡಿಕೆ ಶಿವಕುಮಾರ್ ಅವರು ಒಬ್ಬ ಪೊಲೀಸ್ ಅಧಿಕಾರಿಗೆ ಧಮ್ಕಿ ಹಾಕಿರುವುದು ಸರಿಯಲ್ಲ. ಸಮಾಜಘಾತುಕ ಶಕ್ತಿಗಳನ್ನು ಹಿಡಿದು ತಂದು ಹೆಡೆಮುರಿ ಕಟ್ಟುವ ಕೆಲಸವನ್ನು ನಮ್ಮ ಅಧಿಕಾರಿಗಳು ಈಗಾಗಲೇ ಮಾಡುತ್ತಿದ್ದಾರೆ ಎಂದು ತಿಳಿಸಿದರು.








