ಬಾಲಿವುಡ್ ನ ಹಿರಿಯ ನಟ ದಿಲೀಪ್ ಕುಮಾರ್ ಅವರ ಇಬ್ಬರು ಸಹೋದರರಿಗೆ ಕೊರೋನಾ ಸೋಂಕು
ಮುಂಬೈ, ಅಗಸ್ಟ್ 17: ಬಾಲಿವುಡ್ ನ ಹಿರಿಯ ನಟ ದಿಲೀಪ್ ಕುಮಾರ್ ಅವರ ಸಹೋದರರಾದ ಎಹ್ಸಾನ್ ಖಾನ್ ಮತ್ತು ಅಸ್ಲಂ ಖಾನ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಪ್ರಸ್ತುತ ಆಸ್ಪತ್ರೆಗೆ ದಾಖಲಾಗಿದ್ದಾರೆ.
90 ವರ್ಷ ವಯಸ್ಸಿನ ಎಹ್ಸಾನ್ ಮತ್ತು 88 ವರ್ಷ ವಯಸ್ಸಿನ ಅಸ್ಲಂ ಅವರನ್ನು ಶನಿವಾರ ತಡರಾತ್ರಿ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ದಿಲೀಪ್ ಕುಮಾರ್ ಅವರಿಂದ ಪ್ರತ್ಯೇಕವಾಗಿ ವಾಸಿಸುವ ಇಬ್ಬರೂ ಸಹೋದರರಿಗೆ ಡಾ.ಜಲೀಲ್ ಪಾರ್ಕರ್ ಚಿಕಿತ್ಸೆ ನೀಡುತ್ತಿದ್ದಾರೆ.
ಅವರನ್ನು ಶನಿವಾರ ತಡರಾತ್ರಿ ಆಸ್ಪತ್ರೆಗೆ ಕರೆತರಲಾಗಿದ್ದು, ಇಬ್ಬರಿಗೂ ಕೋವಿಡ್-19 ಸೋಂಕು ದೃಢಪಟ್ಟಿದೆ. ಅವರ ಆಮ್ಲಜನಕದ ಮಟ್ಟವು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ವೆಂಟಿಲೇಟರ್ ಬೆಂಬಲದಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಪಾರ್ಕರ್ ತಿಳಿಸಿದ್ದಾರೆ.

97 ವರ್ಷದ ದಿಲೀಪ್ ಕುಮಾರ್ ಮತ್ತು ಅವರ ಪತ್ನಿ 75 ವರ್ಷದ ನಟಿ ಸೈರಾ ಭಾನು ಕೊರೋನಾ ಸೋಂಕಿನಿಂದ ರಕ್ಷಿಸಿ ಕೊಳ್ಳುವ ನಿಟ್ಟಿನಲ್ಲಿ ಮಾರ್ಚ್ ನಿಂದ ಸಂಪೂರ್ಣವಾಗಿ ಹೋಂ ಕ್ವಾರಂಟೈನ್ ನಲ್ಲಿ ಇದ್ದಾರೆ.








