ಕೊರೊನಾ 4ನೇ ಅಲೆ ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಜೊತೆ ಚರ್ಚೆ : ಸುಧಾಕರ್
ಬೆಂಗಳೂರು: ಜನರು ಮಾಸ್ಕ ಧರಿಸುತ್ತಿಲ್ಲ. ಕೊರೊನಾ ಹೋಗಿದೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸಚಿವ ಡಾ.ಕೆ, ಸುಧಾಕರ್ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸಂಬಂಧ ಇಂದು ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ ಇದೆ. ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಇರುತ್ತಾರೆ. 4 ನೇ ಅಲೆ ಹೇಗೆ ರಿಯಾಕ್ಟ್ ಮಾಡುತ್ತದೆ. ಹೊಸ ಪ್ರಭೇಧ ಏನಾದರೂ ಇದೆಯಾ ಅಂತ ಇವತ್ತಿನ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಸಭೆಯಲ್ಲಿ ಮುನ್ನೆಚ್ಚರಿಕೆ ಕ್ರಮ, 4ನೇ ಅಲೆ ಎದುರಿಸಲು ಯಾವ ಕ್ರಮ ತೆಗೆದುಕೊಳ್ಳಬೇಕು ಅಂತ ಚರ್ಚಿಸುತ್ತೇವೆ ಎಂದು ತಿಳಿಸಿದರು.
ಇನ್ನೂ ಅನೇಕ ಜನರು ಲಸಿಕೆ ಕೂಡಾ ಪಡೆದಿಲ್ಲ. 2ನೇ ಡೋಸ್ ಪಡೆದಿಲ್ಲದವರು ಎರಡನೇ ಡೋಸ್ ಪಡೆಯಬೇಕು. ಬೂಸ್ಟರ್ ಡೋಸ್ ಕೂಡಾ ಪಡೆಯಬೇಕು. 12 ವರ್ಷ ಮೇಲ್ಪಟ್ಟ ಮಕ್ಕಳಿಗೂ ಪೋಷಕರು ಲಸಿಕೆ ಕೊಡಿಸಬೇಕು. ಆದಷ್ಟು ಬೇಗ 5 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಬರಲಿದೆ. ಈ ಎಲ್ಲಾ ಅಂಶಗಳನ್ನು ಇವತ್ತಿನ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದರು.
ಇನ್ನೂ ಟೆಸ್ಟಿಂಗ್ ವಿಚಾರವಾಗಿ, ಪಾಸಿಟಿವಿಟಿ ದರದ ಆಧಾರದಲ್ಲಿ ಟೆಸ್ಟಿಂಗ್ ಜಾಸ್ತಿ ಮಾಡುತ್ತೇವೆ. ತಾಂತ್ರಿಕ ಸಲಹಾ ಸಮಿತಿ ಸಲಹೆ ಮೇರೆಗೆ ನಾವು ಟೆಸ್ಟಿಂಗ್ ಮಾಡುತ್ತಿದ್ದೇವೆ. ಅನಗತ್ಯವಾಗಿ ಟೆಸ್ಟ್ ಮಾಡಬೇಕಾಗಿಲ್ಲ. ನಮಗೆ 4ನೇ ಅಲೆ ಬಂದರೆ ಆಸ್ಪತ್ರೆಗೆ ಸೇರುವವರು ಹೆಚ್ಚಾಗುತ್ತಾರಾ ಎಂಬ ಬಗ್ಗೆ ಚರ್ಚೆ ಮಾಡಬೇಕಿದೆ. ಈ ಬಗ್ಗೆಯೂ ಇವತ್ತು ಮಾಹಿತಿ ಕಲೆ ಹಾಕುತ್ತೇವೆ ಎಂದು ತಿಳಿಸಿದ್ದಾರೆ.
ನಮ್ಮಲ್ಲಿ ಓಮಿಕ್ರಾನ್ ಸಬ್ ವೇರಿಯಂಟ್ ಕಂಡು ಬಂದಿಲ್ಲ. ಈಗಾಗಲೇ ಲ್ಯಾಬ್‍ನಿಂದ ಕೇಂದ್ರಕ್ಕೆ ಮಾಹಿತಿ ರವಾನೆ ಆಗಿದೆ. ಕೇಂದ್ರದಿಂದ ಇನ್ನೂ ಅಧಿಕೃತವಾಗಿ ಯಾವುದೇ ಮಾಹಿತಿ ಕೊಟ್ಟಿಲ್ಲ. ಹೀಗಾಗಿ ರಾಜ್ಯದಲ್ಲಿ ಹೊಸ ತಳಿ ಪತ್ತೆ ಬಗ್ಗೆ ಆತಂಕ ಇಲ್ಲ ಎಂದು ಹೇಳಿದ್ದಾರೆ.
ಕೊರೊನಾ 4ನೇ ಅಲೆ ಭೀತಿ ಹಿನ್ನಲೆ ಏರ್ ಪೋರ್ಟ್‍ಗಳಲ್ಲಿ ಕಠಿಣ ನಿಯಮಗಳನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಸೋಂಕು ಹೆಚ್ಚು ಇರುವ 8 ದೇಶಗಳಿಂದ ಬರುವ ಪ್ರಯಾಣಿಕರಿಗೆ ನಿಯಮ ಜಾರಿ ಮಾಡಲಾಗಿದೆ. ಏರ್ ಪೋರ್ಟ್ ನಲ್ಲಿ ಈ ಹಿಂದೆ ಇದ್ದ ಮಾರ್ಗಸೂಚಿಗಳೇ ಮುಂದುವರಿಕೆ ಆಗುತ್ತವೆ. ದೆಹಲಿ ಸೇರಿದಂತೆ ಕೆಲ ರಾಜ್ಯದಲ್ಲಿ ಸೋಂಕು ಹೆಚ್ಚಳವಾಗಿದೆ. ನಾವು ದೆಹಲಿಗಿಂತ 2-3 ವಾರ ಹಿಂದೆ ಇದ್ದೇವೆ. 2-3 ವಾರ ಆದ ಮೇಲೆ ನಮ್ಮಲ್ಲಿ ಹೇಗೆ ಸೋಂಕು ಹೆಚ್ಚಳವಾಗುತ್ತದೆ ಎಂಬ ಬಗ್ಗೆ ಗೊತ್ತಾಗಲಿದೆ ಎಂದಿದ್ದಾರೆ