ಪೌರಕಾರ್ಮಿಕರಿಗೆ ಉಚಿತ ನಿವೇಶನ ವಿತರಣೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್
ಚಿಕ್ಕಬಳ್ಳಾಪುರದಲ್ಲಿ ಅತ್ಯಾಧುನಿಕ, ದೇಶದಲ್ಲೇ ಮೊದಲ ಲೆವೆಲ್ -2 ಜೈವಿಕ ಸುರಕ್ಷತೆಯ ಆರ‍್ಟಿಪಿಸಿಆರ್ ಲ್ಯಾಬ್ ಉದ್ಘಾಟನೆ
ಚಿಕ್ಕಬಳ್ಳಾಪುರ – ಜುಲೈ, 11, 2020: ಚಿಕ್ಕಬಳ್ಳಾಪುರದ 29 ಪೌರಕಾರ್ಮಿಕರುಗಳಿಗೆ ಉಚಿತ ನಿವೇಶನಗಳ ಹಕ್ಕುಪತ್ರಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸುಧಾಕರ್ ಶನಿವಾರದಂದು ವಿತರಿಸಿದ್ದಾರೆ. ನಗರದಲ್ಲಿ ಶನಿವಾರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಸಚಿವರು, ಕಂದವಾರ ಬಳಿ ಇರುವ ಬಸಪ್ಪನ ಛತ್ರ ನಿರಾಶ್ರಿತರ ಜಾಗದಲ್ಲಿ 20X30 ಅಳತೆಯ ನಿವೇಶನಗಳನ್ನು 29 ಜನ ಪೌರಕಾರ್ಮಿಕರಿಗೆ ವಿತರಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವರೂ ಆಗಿರುವ ಡಾ.ಸುಧಾಕರ್ ಅವರು ಚಿಕ್ಕಬಳ್ಳಾಪುರದಲ್ಲಿ ಅತ್ಯಾಧುನಿಕ ಹಾಗೂ ದೇಶದಲ್ಲೇ ಪ್ರಥಮ ಎನ್ನುಉವ ಹೆಗ್ಗಳಿಕೆಯ ಲೆವೆಲ್-2 ಬಯೋಸೇಫ್ಟಿ ಹೊಂದಿರುವ ಆರ್ಟಿಪಿಸಿಆರ್ ಲ್ಯಾಬ್ ಉದ್ಘಾಟನೆ ಮಾಡಿದರು. ISO 8 ವರ್ಗೀಕರಣ ಹೊಂದಿರುವ ಈ ಲ್ಯಾಬ್ ಊಷ್ಣತೆ ನಿಯಂತ್ರಿತ ಹಾಗೂ ಸ್ವಚ್ಛ ಹವೆಯ ಲ್ಯಾಬ್ ಆಗಿದೆ. ಬಯೋ ಮೆಡಿಕಲ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ವ್ಯವಸ್ಥೆಯನ್ನು ಈ ಪ್ರಯೋಗಾಲಯ ಹೊಂದಿರುತ್ತದೆ. ಇದರಿಂದಾಗಿ ಜಿಲ್ಲೆಯ ಎಲ್ಲಾ ಕೋವಿಡ್ ಪರೀಕ್ಷೆಗಳನ್ನು ಇನ್ನು ಮುಂದೆ ಇಲ್ಲಿಯೇ ನಡೆಸಬಹುದಾಗಿದೆ ಎಂದು ಹೇಳಿದರು,
ಸಚಿವ ಸುಧಾಕರ್ ಅವರು ಜಿಲ್ಲಾ ಖನಿಜ ಪ್ರತಿಷ್ಠಾನ ಕೋಶ ಅನುದಾನದ ಅಡಿಯಲ್ಲಿ ನೇರ ಹಾಗೂ ಪರೋಕ್ಷ ಗಣಿಬಾದಿತ ಪ್ರದೇಶದ 12 ಜನ ಫಲಾನುಭವಿಗಳಿಗೆ ಇ-ರಿಕ್ಷಾ ವಾಹನ ವಿತರಿಸಿದರು. 18.63 ಲಕ್ಷ ರೂ.ವೆಚ್ಚದ ಈ ವಾಹನಗಳು ಪರಿಸರಸ್ನೇಹಿಯಾಗಿದ್ದು ಫಲಾನುಭವಿಗಳಿಗೆ ಉಚಿತವಾಗಿ ವಿತರಿಸಲಾಯಿತು. ಬ್ಯಾಟರಿ ಚಾಲಿತ ಈ ರಿಕ್ಷಾಗಳು 75 ಕಿಮೀ ವರೆಗೆ ಸಾಗಬಲ್ಲವು. 18.83 ಲಕ್ಷ ಮೊತ್ತದ ಈ ಯೋಜನೆಯಲ್ಲಿ ಫಲಾನುಭವಿಗಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗಲಿವೆ ಎಂದು ಸಚಿವರು ಹೇಳಿದರು.
ಇತರೆ ಕಾರ್ಯಕ್ರಮಗಳಲ್ಲಿ ಭಗವಹಿಸಿದ್ದ ಸಚಿವರು, ಎಸ್ಡಿಐಎಂಟಿ ಬಡಾವಣೆಯಲ್ಲಿ ಹಾಗೂ ಮುನ್ಸಿಪಲ್ ಬಡಾವಣೆಯಲ್ಲಿ ನಿರ್ಮಿಸಲಾಗಿರುವ ಪಾರ್ಕ್‌ಗಳ ಉದ್ಘಾಟನೆ ಮಾಡಿದರು. ಕಂದವಾರ ವಾರ್ಡಿನ 140 ಎಸ್‍ಸಿ/ಎಸ್ಟಿ ವಿದ್ಯಾರ್ಥಿಗಳಿಗೆ 8.47 ಲಕ್ಷ ಮೊತ್ತದ ವಿದ್ಯಾರ್ಥಿವೇತನ ವಿತರಿಸಿದರು. SSLC ಹಾಗೂ PUC ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ಇದರಿಂದ ಪ್ರಯೋಜನ ಆಗಲಿದೆ ಎಂದು ಸಚಿವರು ಹೇಳಿದರು. ಹಲವಾರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.