ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳ ಪೈಕಿ ಕೆಲವರ ಪೋಷಕರು ಹೈಕೋರ್ಟ್ ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಹೌದು ಈಗಾಗಲೇ ಪ್ರಕರಣ ಸಂಬಂಧ ಪೊಲೀಸರು 300ಕ್ಕೂ ಹೆಚ್ಚು ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಇದರ ಬೆನ್ನಲ್ಲೇ ಕೆಲ ಆರೋಪಿಗಳ ಪೋಷಕರ ಈ ನಡೆ ಪೊಲೀಸರಿಗೆ ತಲೆನೋವಾಗುವ ಸಾಧ್ಯತೆಯಿದೆ.
ಮಹಮ್ಮದ್ ರಫೀಕ್ ಮತ್ತು ಫಯಾಜ್ ಪೋಷಕರು, ಸಮೀವುದ್ದೀನ್ ಪತ್ನಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ತಮ್ಮ ಮಕ್ಕಳು ನಾಪತ್ತೆಯಾಗಿರುವುದಾಗಿ ಅರ್ಜಿ ಸಲ್ಲಿಸಿ ತನಿಖೆ ಡೈವರ್ಟ್ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಕೋರ್ಟ್ ಗೆ ಈ ಅರ್ಜಿ ಸಲ್ಲಿಕೆಯಾದಲ್ಲಿ ಪೊಲೀಸರು ಕೋರ್ಟ್ ಗೆ ವಿವರಣೆ ನೀಡಲು ಹೆಚ್ಚಿನ ಗಮನ ನೀಡಬೇಕಿದ್ದು, ಈ ನಿಟ್ಟಿನಲ್ಲಿಯೇ ತಂತ್ರಗಾರಿಕೆ ಹೆಣೆಯಲಾಗುತ್ತಿದೆ ಎನ್ನಲಾಗುತ್ತಿದೆ.