ಆಸ್ಪತ್ರೆಗಳ ಮೂಲಕ ಸರ್ಕಾರ ಲೂಟಿ : ಡಿ.ಕೆ.ಶಿವಕುಮಾರ್
ಬೆಂಗಳೂರು : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರಿಂದ ಪಿಕ್ ಪಾಕೆಟ್ ಮಾಡುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾದಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರಗಳು ಜನರ ಪರವಾಗಿ ನಿಲ್ಲಬೇಕಿತ್ತು.
ಆದ್ರೆ ಸರ್ಕಾರಗಳು ಜನರಿಂದ ಪಿಕ್ ಪಾಕೇಟ್ ಮಾಡುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಾಸಗಿ ಆಸ್ಪತ್ರೆಗಳ ಮೂಲಕ ಜನರನ್ನು ಲೂಟಿ ಮಾಡುತ್ತಿವೆ.
ಖಾಸಗಿ ಆಸ್ಪತ್ರೆಗೆ ಹೋದರೆ ಯಾವುದೇ ರೋಗ ಇಲ್ಲವೆಂದರೂ 5 ಲಕ್ಷ ರೂಪಾಯಿ ಬಿಲ್ ಮಾಡುತ್ತಾರೆ. ರೋಗ ಇಲ್ಲದಿದ್ದರೂ ಬಿಲ್ ಮಾತ್ರ ಯಾಕೆ ಜಾಸ್ತಿಯಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ.
ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆಗಳ ನಡುವೆ ಅದ್ಯಾವ ಒಪ್ಪಂದ ನಡೆದಿದೆ ಎಂಬುದು ತಿಳಿದಿಲ್ಲ ಎಂದು ಆರೋಪಿಸಿದರು.
ಇನ್ನು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ಡಿ.ಕೆ.ಶಿವಕುಮಾರ್, ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಜನ ಕ್ಯೂ ನಿಲ್ಲುವುದೇ ಆಗಿದೆ.
ನೋಟ್ ಬ್ಯಾನ್ ಮಾಡಿ ಬ್ಯಾಂಕ್ ಮುಂದೆ ಕ್ಯೂ ನಿಲ್ಲಿಸಿದರು. ಕೊರೊನಾ ವೇಳೆ ಆಸ್ಪತ್ರೆಗಳ ಬಳಿ ಬೆಡ್ ಗಾಗಿ ಕ್ಯೂ ನಿಲ್ಲಿಸಿದರು.
ಸೋಂಕಿತರ ಚಿಕಿತ್ಸೆಗಾಗಿ ಔಷಧಕ್ಕಾಗಿ ಕ್ಯೂ ನಿಲ್ಲಿಸಿದರು. ಅಂತಿಮವಾಗಿ ಸತ್ತಾಗಲೂ ಚಿತಾಗಾರದ ಬಳಿ ಕ್ಯೂ ನಿಲ್ಲುವಂತ ಸ್ಥಿತಿ ತಂದಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.









