ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮಾತಿನ ಸಮರ ತಾರಕಕ್ಕೇರಿದೆ. ಆಡಳಿತರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ನಡುವಿನ ಜಟಾಪಟಿ ವೈಯಕ್ತಿಕ ಟೀಕೆಗಳ ಹಂತಕ್ಕೆ ತಲುಪಿದೆ. ಇದೀಗ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದು, ಏಕವಚನದಲ್ಲೇ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ, ಹಾಸನ ರಾಜಕಾರಣ ಮತ್ತು ರೈತರ ಸಂಕಷ್ಟಗಳ ಕುರಿತು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿರುತ್ತಾರೆ.
ನಿಮ್ಮ ಲೀಡರ್ ನಿದ್ದೆ ಮಾಡ್ತಾನಾ?
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಿಎಂ ಆಗುವ ಆಸೆಯ ಕುರಿತು ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ವ್ಯಂಗ್ಯವಾಡಿದ್ದಾರೆ. ಏನೆಲ್ಲಾ ಲೂಟಿ ಆದರೂ ಈ ದೇಶ ಇನ್ನೂ ಬದುಕಿದೆ. ಆದರೆ ಈಗ ಯಾರು ಲೂಟಿ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಇಷ್ಟೆಲ್ಲಾ ಸಂಪತ್ತು ಮಾಡಿ ಅದನ್ನು ತೆಗೆದುಕೊಂಡು ಏನು ಮಾಡುತ್ತೀರಾ? ಯಾವನಿಗೂ ನೆಮ್ಮದಿಯಿಂದ ನಿದ್ದೆ ಮಾಡಲು ಆಗುತ್ತಿಲ್ಲ. ನಿಮ್ಮ ಲೀಡರ್ ಯಾರೋ ಸಿಎಂ ಆಗಬೇಕು ಅಂತಾನಲ್ಲ, ಅವನಿಗೆ ರಾತ್ರಿ ನಿದ್ದೆ ಬರುತ್ತದಾ? ಎಂದು ಕುಮಾರಸ್ವಾಮಿ ಅವರು ಡಿಕೆಶಿ ಅವರ ಹೆಸರು ಪ್ರಸ್ತಾಪಿಸದೆಯೇ ಏಕವಚನದಲ್ಲಿಯೇ ಪ್ರಶ್ನಿಸುವ ಮೂಲಕ ಕಾಲೆಳೆದಿದ್ದಾರೆ. ಅಧಿಕಾರದ ಲಾಲಾಸೆಯಲ್ಲಿ ಕಾಂಗ್ರೆಸ್ ನಾಯಕರು ನೆಮ್ಮದಿ ಕಳೆದುಕೊಂಡಿದ್ದಾರೆ ಎಂಬರ್ಥದಲ್ಲಿ ಅವರು ಚಾಟಿ ಬೀಸಿದ್ದಾರೆ.
ದೊಡ್ಡಗೌಡರ ಜೀವನ ಹಾಳು ಮಾಡಿದ್ದೇ ಕಾಂಗ್ರೆಸ್
ತಮ್ಮ ಮತ್ತು ಬಿಜೆಪಿ ನಡುವಿನ ಮೈತ್ರಿಯ ಕುರಿತು ಸ್ಪಷ್ಟನೆ ನೀಡಿರುವ ಕುಮಾರಸ್ವಾಮಿ, ಇದರಲ್ಲಿ ಯಾವುದೇ ಸಣ್ಣತನವಿಲ್ಲ, ಇದು ಮುಕ್ತ ತೀರ್ಮಾನ ಎಂದು ಹೇಳಿದ್ದಾರೆ. ನಾವು ಕಾಂಗ್ರೆಸ್ ಸಹವಾಸವನ್ನು ನೋಡಿಯಾಗಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕಾಂಗ್ರೆಸ್ ಪಕ್ಷವನ್ನು ನಂಬಿ ತಮ್ಮ ರಾಜಕೀಯ ಜೀವನವನ್ನೇ ಹಾಳುಮಾಡಿಕೊಂಡರು. ಗೌಡರ ಜೀವನ ರಾಜಕೀಯವಾಗಿ ಸಂಕಷ್ಟಕ್ಕೆ ಸಿಲುಕಲು ಪ್ರಮುಖ ಕಾರಣವೇ ಈ ಕಾಂಗ್ರೆಸ್ ಎಂದು ಕುಮಾರಸ್ವಾಮಿ ಅವರು ಹಳೆಯ ಕಹಿ ಘಟನೆಗಳನ್ನು ಮೆಲುಕು ಹಾಕುತ್ತಾ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.
ವೈರಾಗ್ಯದ ಮಾತು: ಕಾಡಿಗೆ ಹೋಗಬೇಕು ಅನ್ನಿಸುತ್ತಿದೆ
ರಾಜಕೀಯ ಜಂಜಾಟಗಳಿಂದ ಬೇಸತ್ತಿರುವಂತೆ ಕಂಡ ಕುಮಾರಸ್ವಾಮಿ, ತಮಗೆ ಕಾಡಿಗೆ ಹೋಗಬೇಕು ಎನಿಸುತ್ತಿದೆ ಎಂದು ವೈರಾಗ್ಯದ ಮಾತುಗಳನ್ನಾಡಿದ್ದಾರೆ. ನನಗೆ ಮತ್ತೆ ಮುಖ್ಯಮಂತ್ರಿಯಾಗಬೇಕು ಎನ್ನುವ ಹಪಾಹಪಿ ಇಲ್ಲ. ಆದರೆ, ನಾನು ಬದುಕಿರುವವರೆಗೆ ನನ್ನ ಮೇಲೆ ವಿಶ್ವಾಸವಿಟ್ಟು ಬರುವ ಬಡವರಿಗೆ ಶಕ್ತಿ ತುಂಬಲು ಸಾಧ್ಯವೇ ಎಂಬ ಚಿಂತೆ ನನ್ನನ್ನು ಕಾಡುತ್ತಿದೆ. ದೇವರು ನನಗೆ ಎಲ್ಲವನ್ನೂ ಕೊಟ್ಟಿದ್ದಾನೆ, ಅಧಿಕಾರವನ್ನೂ ನೋಡಿದ್ದೇನೆ. ಆದರೆ ಪ್ರಸ್ತುತ ನನ್ನ ಮನಸ್ಥಿತಿ ಹೇಗಿದೆ ಎಂದರೆ, ಯಾರ ಕೈಗೂ ಸಿಗದೆ ದಟ್ಟ ಅರಣ್ಯಕ್ಕೆ ಹೋಗಿ ಗುಪ್ತವಾಗಿ ಇರಬೇಕು ಎನಿಸುತ್ತಿದೆ ಎಂದು ಭಾವುಕರಾಗಿ ನುಡಿದಿದ್ದಾರೆ.
ಹಾಸನದಲ್ಲಿ ಕಾಂಗ್ರೆಸ್ ಅಬ್ಬರ: ಕೇವಲ ಪ್ರಚಾರಕ್ಕಾಗಿ ಮಾತ್ರ
ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಚಟುವಟಿಕೆಗಳ ಬಗ್ಗೆಯೂ ಎಚ್‌ಡಿಕೆ ಕಿಡಿಕಾರಿದ್ದಾರೆ. ಇತ್ತೀಚೆಗೆ ಹಾಸನಕ್ಕೆ ಲಗ್ಗೆ ಇಡಲು ಕಾಂಗ್ರೆಸ್ ನಾಯಕರು ವೇಗದಲ್ಲಿದ್ದಾರೆ. ಬರೀ ವೇದಿಕೆ ಅಲಂಕಾರ, ಬಾಣ ಬಿರುಸು ಮತ್ತು ಜಾಹೀರಾತುಗಳ ಮೂಲಕ ಜನರನ್ನು ಮರಳು ಮಾಡಲು ಹೊರಟಿದ್ದಾರೆ. 70 ಸಾವಿರ ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡಿದ್ದೇವೆ ಎಂದು ಪ್ರಚಾರ ಪಡೆಯುತ್ತಿದ್ದಾರೆ. ಆದರೆ, ಜಿಲ್ಲೆಗೆ ಯಾರೂ ಮಾಡದ ಅಭಿವೃದ್ಧಿಗೆ ಚಾಲನೆ ಕೊಟ್ಟಿದ್ದು ನಾವು ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ರೈತರ ಸರಣಿ ಆತ್ಮಹತ್ಯೆ: ಸರ್ಕಾರದ ವಿರುದ್ಧ ಕೆಂಡಾಮಂಡಲ
ರಾಜ್ಯದಲ್ಲಿ ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದು ಬೆಳೆ ನಾಶವಾಗಿದೆ. ತೊಗರಿ, ಮೆಕ್ಕೆಜೋಳಕ್ಕೆ ಸರ್ಕಾರ ಎಂಎಸ್‌ಪಿ ದರ ನಿಗದಿ ಮಾಡಿದೆ, ಆದರೆ ಖರೀದಿ ಕೇಂದ್ರಗಳೆಲ್ಲಿವೆ? ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ 2400ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಂದಾಯ ಸಚಿವರು ಪರಿಹಾರ ಕೊಡುತ್ತೇವೆ ಎನ್ನುತ್ತಾರೆ, ಆದರೆ ಅತಿವೃಷ್ಟಿಯಿಂದಾದ ಲಕ್ಷಾಂತರ ಕೋಟಿ ನಷ್ಟಕ್ಕೆ ಸರ್ಕಾರದ ಪರಿಹಾರ ಏನೂ ಸಾಲದು. ವೇದಿಕೆ ಮೇಲೆ ಬರೀ ಪೊಳ್ಳು ಭರವಸೆಗಳನ್ನು ಕೊಟ್ಟುಕೊಂಡು ಎಷ್ಟು ದಿನ ಕಾಲ ಕಳೆಯುತ್ತೀರಿ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಐದನೇ ಜನ್ಮ ಕೊಟ್ಟ ಭಗವಂತ: ಕಡೆಯದಾಗಿ ಒಂದು ಅವಕಾಶ ಕೊಡಿ
ಅನಾರೋಗ್ಯದ ನಡುವೆಯೂ ರಾಜಕೀಯದಲ್ಲಿ ಸಕ್ರಿಯರಾಗಿರುವ ಕುಮಾರಸ್ವಾಮಿ, ದೇವರು ನನಗೆ 5 ಬಾರಿ ಮರುಜೀವನ ಕೊಟ್ಟಿದ್ದಾನೆ ಎಂದು ಸ್ಮರಿಸಿದರು. ನನಗೆ ಕೇಂದ್ರ ಸರ್ಕಾರ ಅಥವಾ ಬೇರೆ ಯಾವ ಸರ್ಕಾರದ ಆರ್ಥಿಕ ನೆರವಿನ ಅಗತ್ಯವಿಲ್ಲ. ಎರಡು ಬಾರಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಅನುಭವ ನನಗಿದೆ. ರಾಜ್ಯದ ಖಜಾನೆಯನ್ನು ಖಾಲಿ ಮಾಡದೆಯೇ ಅಭಿವೃದ್ಧಿ ಮಾಡುವುದು ಹೇಗೆ ಎಂದು ನನಗೆ ತಿಳಿದಿದೆ. ಭಗವಂತ ಕೊಟ್ಟಿರುವ ಈ ಐದನೇ ಬಾರಿಯ ಜೀವನದಲ್ಲಿ, ರಾಜ್ಯದ ಜನತೆ ಕಡೆಯದಾಗಿ ಒಂದು ಪೂರ್ಣ ಅವಕಾಶ ಕೊಡಲಿ ಎಂದು ಕುಮಾರಸ್ವಾಮಿ ಅವರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.








