ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿನ ಆಂತರಿಕ ಕಚ್ಚಾಟ ಹಾಗೂ ಆಡಳಿತ ವೈಫಲ್ಯಗಳ ಕುರಿತು ಪ್ರತಿಪಕ್ಷ ಬಿಜೆಪಿ ವಾಗ್ದಾಳಿ ಮುಂದುವರಿಸಿದ್ದು, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪಕ್ಷದ ಶಿಸ್ತು ಕ್ರಮದ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ಅವರು ತಾರತಮ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ, ನಿಮ್ಮ ಪೌರುಷ ಯತೀಂದ್ರ ಸಿದ್ದರಾಮಯ್ಯ ಅವರ ಮುಂದೆ ನಡೆಯುವುದಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಮಾಡಿರುವ ಬಿಜೆಪಿ, ರಾಜ್ಯದ ಆಡಳಿತ ಯಂತ್ರದ ಸ್ಥಿತಿಗತಿ ಹಾಗೂ ಕಾಂಗ್ರೆಸ್ ನಾಯಕರ ನಡುವಿನ ಶೀತಲ ಸಮರದ ಬಗ್ಗೆ ವ್ಯಂಗ್ಯವಾಡಿದೆ.
ಯತೀಂದ್ರಗೆ ನೋಟಿಸ್ ನೀಡಲು ಭಯವೇ?
ತಮ್ಮ ಆಪ್ತ ಶಿಷ್ಯರೆನಿಸಿಕೊಂಡಿರುವ ಶಾಸಕ ಇಕ್ಬಾಲ್ ಹುಸೇನ್ ಮತ್ತು ನಾಯಕ ಉಗ್ರಪ್ಪ ಅವರಿಗೆ ನೋಟಿಸ್ ನೀಡುವಾಗ ತೋರುವ ನಿಮ್ಮ ಪೌರುಷ ಮತ್ತು ಅಧಿಕಾರ ದರ್ಪ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡುವ ವಿಚಾರದಲ್ಲಿ ಎಲ್ಲಿ ಮಾಯವಾಯಿತು? ಯತೀಂದ್ರ ಅವರಿಗೆ ನೋಟಿಸ್ ನೀಡಲು ಸಾಧ್ಯವಾಗದಷ್ಟು ಅಸಹಾಯಕತೆ ನಿಮ್ಮನ್ನು ಕಾಡುತ್ತಿದೆಯೇ ಎಂದು ಬಿಜೆಪಿ, ಡಿಕೆಶಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ಪಕ್ಷದ ಶಿಸ್ತಿನ ಪಾಠ ಕೇವಲ ಕೆಲವು ನಾಯಕರಿಗಷ್ಟೇ ಸೀಮಿತವೇ? ಸಿದ್ದರಾಮಯ್ಯ ಅವರ ಕುಟುಂಬದ ವಿಷಯ ಬಂದಾಗ ನಿಮ್ಮ ಕೆಪಿಸಿಸಿ ಅಧ್ಯಕ್ಷ ಗಿರಿ ಮಂಕಾಗುವುದೇ ಎಂದು ಬಿಜೆಪಿ ಲೇವಡಿ ಮಾಡಿದೆ.
ಬಜೆಟ್ ಬಿಟ್ಟು ದೆಹಲಿ ಯಾತ್ರೆ
ರಾಜ್ಯದಲ್ಲಿ ಬಜೆಟ್ ಪೂರ್ವಭಾವಿ ಸಭೆಗಳು ನಡೆಯುತ್ತಿವೆ. ಹಣಕಾಸಿನ ವಿಚಾರದಲ್ಲಿ ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇಂತಹ ಗಂಭೀರ ಸಂದರ್ಭದಲ್ಲಿ ರಾಜ್ಯದ ಅಭಿವೃದ್ಧಿ ಹಾಗೂ ಬಜೆಟ್ ಸಿದ್ಧತೆಗೆ ಗಮನ ನೀಡುವ ಬದಲು, ಡಿಕೆ ಶಿವಕುಮಾರ್ ಅವರು ಹೈಕಮಾಂಡ್ ಓಲೈಕೆಗಾಗಿ ದೆಹಲಿ ಯಾತ್ರೆಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ. ಒಂದು ಕಡೆ ಖಾಲಿ ಖಜಾನೆ, ಮತ್ತೊಂದು ಕಡೆ ಕಾಂಗ್ರೆಸ್ ನಾಯಕರ ನಡುವಿನ ಬೀದಿ ಜಗಳದಿಂದಾಗಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಆರೋಪಿಸಿದೆ.
ಕುರ್ಚಿ ಕಾದಾಟ ಮತ್ತು ಕೈಕಮಾಂಡ್
ದೆಹಲಿಯ ಹೈಕಮಾಂಡ್ ಸಮ್ಮುಖದಲ್ಲೇ ಅಧಿಕಾರ ಹಂಚಿಕೆಯ ಒಪ್ಪಂದವಾಗಿದೆ ಎಂದು ಹೇಳುತ್ತೀರಿ. ಆದರೆ ದಿನ ಬೆಳಗಾದರೆ ಸಾಕು ಕುರ್ಚಿ ವಿಚಾರವಾಗಿ ಕಿತ್ತಾಡುತ್ತೀರಿ. ಇದೀಗ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಯಾರ ಬಲದಿಂದ ಬಂದಿದೆ ಎಂಬುದು ನಿಮಗೆ ತಿಳಿಯದ ವಿಚಾರವೇನಲ್ಲ. ಆದರೂ ಜಾಣ ಕುರುಡು ಪ್ರದರ್ಶಿಸುತ್ತಿದ್ದೀರಿ ಎಂದು ಬಿಜೆಪಿ ಕುಟುಕಿದೆ.
ಬ್ರ್ಯಾಂಡ್ ಬೆಂಗಳೂರಾ ಅಥವಾ ಗಬ್ಬು ನಾರುವ ಬೆಂಗಳೂರಾ?
ನಗರದ ಮೂಲಸೌಕರ್ಯದ ಬಗ್ಗೆಯೂ ಡಿಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿರುವ ಬಿಜೆಪಿ, ಆಕಾಶದಲ್ಲಿ ಸ್ಕೈಡೆಕ್ ಕಟ್ಟುವ, ಪಾತಾಳದಲ್ಲಿ ಟನಲ್ ರಸ್ತೆ ನಿರ್ಮಿಸುವ ನಿಮ್ಮ ಬಣ್ಣದ ಕನಸುಗಳನ್ನು ಬದಿಗಿಡಿ. ಮೊದಲು ಲಕ್ಷಾಂತರ ಜನ ನಿತ್ಯ ಓಡಾಡುವ ರಾಜಧಾನಿಯ ಹೆಬ್ಬಾಗಿಲಾದ ಮೆಜೆಸ್ಟಿಕ್ ಸಬ್ವೇಯನ್ನು ಸ್ವಚ್ಛಗೊಳಿಸಿ ಎಂದು ಆಗ್ರಹಿಸಿದೆ.
ಜನರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಮೆಜೆಸ್ಟಿಕ್ ನಲ್ಲಿದೆ. ಇದೇನಾ ನೀವು ಜಗತ್ತಿಗೆ ತೋರಿಸಲು ಹೊರಟಿರುವ ಬ್ರ್ಯಾಂಡ್ ಬೆಂಗಳೂರು? ಅದಕ್ಕೆ ಗಬ್ಬು ನಾರುವ ಬೆಂಗಳೂರು ಎಂಬ ಹೊಸ ಟ್ಯಾಗ್ ಲೈನ್ ಕೊಡುವುದು ಸೂಕ್ತ ಎಂದು ಬಿಜೆಪಿ ವ್ಯಂಗ್ಯವಾಡಿದೆ.








