ನನ್ನ ಅವಧಿಯ ದಾಖಲೆ ತರುವಂತೆ ಅಧಿಕಾರಿಗಳಿಗೆ ಒತ್ತಡ ಹೇರಲಾಗುತ್ತಿದೆ – BJP ವಿರುದ್ಧ ಡಿಕೆಶಿ ಆರೋಪ
ಇಂಧನ ಇಲಾಖೆ ಅಧಿಕಾರಿಗಳಿಗೆ ನನ್ನ ಅವಧಿಯ ದಾಖಲೆ ತರುವಂತೆ ಒತ್ತಡಹೇರುತ್ತಿದ್ದಾರೆ ಎಂದು ಮೈಸೂರಿನಲ್ಲಿ ಡಿಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಭಾರತ್ ಜೋಡೋ ಯಾತ್ರೆಯ ಅಂಗವಾಗಿ ಅ.2ರಂದು ಬದನವಾಳು ಗ್ರಾಮಕ್ಕೆ ರಾಹುಲ್ ಗಾಂಧಿ ಆಗಮನ ಹಿನ್ನೆಲೆ ಇಂದು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬದನವಾಳು ಗ್ರಾಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬೇಟಿ ನೀಡಿ ಸಿದ್ಧತೆ ಪರಿಶೀಲಿಸಿದ್ದಾರೆ.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್ ಕೆಲ ಅಧಿಕಾರಿಗಳು ನನಗೆ ಕರೆ ಮಾಡಿದ್ದರು. ನನ್ನ ಅವಧಿಯ ದಾಖಲೆ ತರುವಂತೆ ಒತ್ತಡ ಹಾಕಲಾಗುತ್ತಿದೆ. ನಾನು ಎಲ್ಲಾ ದಾಖಲೆಗಳನ್ನು ಕೊಡಿ ಎಂದು ಹೇಳಿದ್ದೇನೆ. ತಪ್ಪು ಮಾಡಿದ್ದರೆ ನಾವೇ ಹಗ್ಗ ಸಹಾ ಕಳುಹಿಸಿಕೊಡುತ್ತೇವೆ. ಈ ಮೂಲಕ ಕಾಂಗ್ರೆಸ್ ಮತ್ತು ನನ್ನನ್ನು ಹೆದರಿಸಲು ಬಿಜೆಪಿ ಮುಂದಾಗಿದೆ. ನಾನು ಯಾವುದಕ್ಕೂ ಹೆದರುವವನಲ್ಲ. ಏನು ಬೇಕಾದರೂ ತನಿಖೆ ಮಾಡಿಕೊಳ್ಳಲಿ ಎಂದು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಇನ್ನು ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಸಮಗ್ರ ತನಿಖೆ ಹೇಳಿಕೆಗೆ ವ್ಯಂಗ್ಯವಾಡಿದ್ರು. ಚಡ್ಡಿ, ಪ್ಯಾಂಟು, ಹಾಸಿಗೆ, ಮೊಟ್ಟೆ ಇತ್ಯಾದಿ ಇತ್ಯಾದಿ ಎಲ್ಲಾ ತನಿಖೆ ಮಾಡಲಿ. ನಾನು ಎಲ್ಲದಕ್ಕೂ ಸಿದ್ದನಾಗಿದ್ದೇನೆ. ಮೂರು ವರ್ಷ ಬೇಕಿತ್ತಾ ತನಿಖೆ ಆರಂಭಿಸಲು? ಎಂದು ಪ್ರಶ್ನಿಸಿದರು.