ರಾಮನಗರ : ದೇಶದಾದ್ಯಂತ ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಅಭಿಯಾನ ಶುರುವಾಗಿದ್ದು, ಈ ವಿಚಾರವಾಗಿ ಸಂಸದ ಡಿ.ಕೆ ಸುರೇಶ್ ಪ್ರತಿಕ್ರಿಯೆ ನೀಡಿದ್ದು, ತಾಕತ್ತಿದ್ದರೆ ಚೀನಾ ವಸ್ತುಗಳನ್ನು ಬ್ಯಾನ್ ಮಾಡಿ ತೋರಿಸಲಿ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಬಹಿರಂಗವಾಗಿ ಸವಾಲು ಹಾಕಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಡಿ.ಕೆ ಸುರೇಶ್, ಕೇಂದ್ರದಲ್ಲಿ ಅವರದ್ದೇ ಸರಕಾರ ಇದೆ. ಈ ಕೂಡಲೇ ಚೀನಾ ವಸ್ತುಗಳನ್ನು ಬ್ಯಾನ್ ಮಾಡಲಿ. ಪ್ರಧಾನಿ ನರೇಂದ್ರ ಮೋದಿಗೆ ಈ ವಿಚಾರದಲ್ಲಿ ರಾಹುಲ್ ಗಾಂಧಿ ಅವರೇ ಬೆಂಬಲ ನೀಡಿದ್ದಾರೆ ಎಂದ ಅವರು, ನೋಟ್ ಬ್ಯಾನ್ ವಿಚಾರ, ಲಾಕ್ ಡೌನ್ ವಿಚಾರದಲ್ಲಿ ದಿಟ್ಟತನ ತೋರಿದ ಪ್ರಧಾನಿ ನರೇಂದ್ರ ಮೋದಿ ಚೀನಾ ವಸ್ತುಗಳನ್ನು ಏಕೆ ಬ್ಯಾನ್ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಮುಂದುವರಿದು ಮೋದಿ ವಿರುದ್ಧ ಕಿಡಿಕಾರಿದ ಅವರು, ಪ್ರಧಾನಿ ನರೇಂದ್ರ ಮೋದಿ, ಅಂದು ವಿರೋಧ ಪಕ್ಷಗಳ ವಿರೋಧದ ನಡುವೆಯೂ ನೋಟ್ ಬ್ಯಾನ್, ಲಾಕ್ ಡೌನ್ ಮಾಡಿದರು. 70 ವರ್ಷದ ಸ್ನೇಹಿತನಾದ ರಷ್ಯಾ ದೇಶವನ್ನು ಇಷ್ಟು ದಿನ ಕಡೆಗಣಿಸಿ, ಇದೀಗ ರಷ್ಯಾ ಜತೆಗೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ಲೇವಡಿ ಮಾಡಿದರು. ಇನ್ನು ಪ್ರಧಾನಿ ನರೇಂದ್ರ ಮೋದಿ ಇತರ ದೇಶಗಳನ್ನು ಸುತ್ತಿ ನೆರೆ ರಾಷ್ಟ್ರಗಳ ಜೊತೆಗಿನ ಬಾಂಧವ್ಯವನ್ನು ಕೆಡಿಸಿಕೊಂಡಿದ್ದಾರೆ ಎಂದು ಸುರೇಶ್ ಕಿಡಿಕಾರಿದ್ದಾರೆ.