ಕುಶಾಲನಗರ ಆ 9 : ಕಳೆದ ಕೆಲವು ದಿನಗಳಿಂದ ಕೊಡಗಿನ ಸುತ್ತಮುತ್ತ ಸುರಿಯುತ್ತಿರುವ ಮಳೆಯಿಂದ ಅನೇಕ ಪ್ರದೇಶಗಳು ಜಲಾವೃತಗೊಂಡಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವವರ ನೆರವಿಗೆ ಧಾವಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಡಿ.ಕೆ ಶಿವಕುಮಾರ್ ಕೊಡಗಿಗೆ ಭೇಟಿ ನೀಡಿದ್ದು, ಅವರನ್ನು ಜಿಲ್ಲಾ ಕಾಂಗ್ರೆಸ್ ನಾಯಕರು ಸ್ವಾಗತಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗು ಕಾಂಗ್ರೆಸ್ ನಲ್ಲಿ ಯಾವುದೇ ಗೊಂದಲಗಳಿದ್ದರೂ ಸರಿಪಡಿಸಿ ಜಿಲ್ಲೆಯಲ್ಲಿ ಕಾಂಗ್ರೆಸ್ ನ್ನು ಮತ್ತಷ್ಟು ಪ್ರಬಲಗೊಳಿಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಪ್ರವಾಹದ ಬಗ್ಗೆ ಮಾತನಾಡಿದ ಡಿಕೆಶಿ,ಕಳೆದ ವರ್ಷ ರಾಜ್ಯ ಸರ್ಕಾರ ಘೋಷಿಸಿದ್ದ ಮಳೆಪರಿಹಾರ ಅನುದಾನ ಇನ್ನೂ ಸಮರ್ಪಕವಾಗಿ ಬಿಡುಗಡೆಯಾಗಿಲ್ಲ. ಕಳೆದ ವರ್ಷ ಮಹಾಮಳೆಯಿಂದಾಗಿ ರಾಜ್ಯದಲ್ಲಿ 35 ಸಾವಿರ ಕೋಟಿ ನಷ್ಟವಾಗಿತ್ತು ಎಂದು ಸರ್ಕಾರ ಅಧಿಕೃತ ಮಾಹಿತಿ ನೀಡಿತ್ತು. ಆದರೆ ಬಿಡುಗಡೆಗೊಳಿಸಿದ್ದ 1800 ಕೋಟಿ ರೂ. ಅನುದಾನದಲ್ಲಿ ವರ್ಷ ಕಳೆದರೂ ಅರ್ಧದಷ್ಟೂ ಸಂತ್ರಸ್ತರಿಗೆ ತಲುಪಿಲ್ಲ. ಮನೆ ಕಳೆದುಕೊಂಡವರಿಗೆ ಮನೆಯನ್ನೂ ಸರಿಯಾಗಿ ನೀಡಿಲ್ಲ ಎಂದು ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಮುಂದುವರಿದು ಮಾತನಾಡಿದ ಅವರು, ಸಂಕಷ್ಟದ ಈ ಸಂದರ್ಭದಲ್ಲಿ ಸಂತ್ರಸ್ತರ ನೆರವಿಗೆ ಧಾವಿಸುವಂತೆ ಕಾಂಗ್ರೆಸ್ ಕಟ್ಟಪ್ಪ ಡಿ.ಕೆ ಶಿವಕುಮಾರ್ ಅವರು ಕರೆ ಕೊಟ್ಟರು.








