ಬೆಂಗಳೂರು, ಜ. 12:ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಒಕ್ಕಲಿಗರ ಸಂಘದ ಪದಾಧಿಕಾರಿಗಳಿಗೆ ಮಹತ್ವದ ಎಚ್ಚರಿಕೆ ನೀಡಿದ್ದಾರೆ. ಜಾತಿ ಗಣತಿ ವಿಚಾರವಾಗಿ ಈಗಲೇ ಸಭೆ ನಡೆಸಿ ಗೊಂದಲ ಸೃಷ್ಟಿಸುವುದು ಬೇಡ ಎಂದು ಅವರು ಸೂಚಿಸಿದ್ದಾರೆ.
ಸಭೆ ಮುಂದೂಡಿ: “ಈ ವಿಚಾರವಾಗಿ ಶ್ರೀಗಳ ಜೊತೆ ನಾನು ಮಾತನಾಡುತ್ತೇನೆ. ಸಭೆಯನ್ನು ಮುಂದೂಡಿ, ಯಾರಿಗೂ ಅನ್ಯಾಯವಾಗದಂತೆ ನಾವು ನೋಡಿಕೊಳ್ಳುತ್ತೇವೆ” ಎಂದು ಡಿಕೆಶಿ ಭರವಸೆ ನೀಡಿದ್ದಾರೆ.
ಪದಾಧಿಕಾರಿಗಳ ಭೇಟಿ:ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಡಿಕೆಶಿ ಅವರನ್ನು ಸದಾಶಿವನಗರ ನಿವಾಸದಲ್ಲಿ ಇಂದು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
“ನಾನು ಯಾವುದೇ ಸಭೆ ಮಾಡಿಲ್ಲ. ಅದರ ಅವಶ್ಯಕತೆ ನನಗಿಲ್ಲ. ಸಂಘದ ಹೊಸ ಪದಾಧಿಕಾರಿಗಳ ತಂಡ ರಾಜಿ ಮಾಡಿಕೊಂಡು ನನ್ನನ್ನು ಭೇಟಿ ಮಾಡಲು ಬಂದಿದ್ದರು. ಮತ್ತೇ ಪದಾಧಿಕಾರಿಗಳ ಮಧ್ಯೆ ಕಿತ್ತಾಟ ನಡೆದರೆ ಆಡಳಿತಾಧಿಕಾರಿ ನೇಮಿಸುವುದಾಗಿ ಎಚ್ಚರಿಕೆ ನೀಡಿದ್ದೇನೆ” ಎಂದು ಡಿಕೆಶಿ ಹೇಳಿದರು.








