ಉಡುಪಿಯಲ್ಲಿ ನಡೆದ ನಾಲ್ವರ ಬರ್ಬರ ಹತ್ಯೆ ಪ್ರಕರಣದ ಚಾರ್ಜ್ ಶೀಟ್ ನ್ನು ಉಡುಪಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ.
ಉಡುಪಿಯ ನೇಜಾರು ಹತ್ತಿರದ ತೃಪ್ತಿ ಲೇ ಔಟ್ ನಲ್ಲಿ ದೀಪಾವಳಿಯ ದಿನವೇ ತಾಯಿ ಹಾಗೂ ಮಕ್ಕಳ ಭೀಕರ ಹತ್ಯೆ ನಡೆದಿತ್ತು. ಚೂರಿಯಿಂದ ಇರಿದು ತಾಯಿ ಹಾಗೂ ಅವರ ಮೂವರು ಮಕ್ಕಳನ್ನು ಕೊಲೆ ಮಾಡಿರುವ ಘಟನೆಗೆ ಇಡೀ ರಾಜ್ಯವೇ ಬೆಚ್ಚಿ ಬಿದ್ದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 244 ಸಾಕ್ಷಿಗಳನ್ನು ಸಂಗ್ರಹಿಸಿದ್ದಾರೆ. ಅಲ್ಲದೇ, ಎಫ್ ಎಸ್ ಎಲ್ ವರದಿ ಕೂಡ ಬಂದಿದೆ.
ಹಂತಕ ಆರೋಪಿ ಪ್ರವೀಣ್ ಚೌಗುಲೆ ಹತ್ಯೆಯ ಹಿಂದಿನ ಘಟನೆ ಕುರಿತು ಬಾಯಿ ಬಿಟ್ಟಿದ್ದಾನೆ. ಆರೋಪಿ ಪ್ರವೀಣ್ ಚೌಗುಲೆ ಹಾಗೂ ಅಯ್ನಾಜ್ ಮಧ್ಯೆ ಸ್ನೇಹವಿತ್ತು. ಈ ಗೆಳೆತನದ ಕುರಿತು ಪ್ರವೀಣ್ ಪತ್ನಿಗೆ ಅನುಮಾನ ಕಾಡಿತ್ತು. ಈ ಅನುಮಾನದಿಂದಾಗಿ ಪ್ರವೀಣ್ ಚೌಗುಲೆ ದಂಪತಿ ಮಧ್ಯೆ ಜಗಳ ನಡೆಯುತ್ತಿತ್ತು. ಇದು ಗೊತ್ತಾಗುತ್ತಿದ್ದಂತೆ ಅಯ್ನಾಜ್ ಸಂಪರ್ಕ ಕಡಿದುಕೊಳ್ಳಲು ತೀರ್ಮಾನಿಸಿದ್ದರು. ಈ ಸಂದರ್ಭದಲ್ಲಿ ಮೃತ ಅಯ್ನಾಜ್ ಪ್ರಿಯಕರ ಕತಾರ್ ನಿಂದ ಮರಳಿ ಬಂದಿದ್ದ. 2023ರ ಅಕ್ಟೋಬರ್ ನಲ್ಲಿ ಕೊನೆಯ ವಾರದಲ್ಲಿ ಪ್ರಿಯಕರನ ಜೊತೆ ಮದುವೆಯಾಗುವುದಾಗಿ ಅಯ್ನಾಜ್ ಹೇಳಿದ್ದರು. ಇದರಿಂದಾಗಿ ಪ್ರವೀಣ್ ಚೌಗುಲೆ ಸಿಟ್ಟಾಗಿದ್ದ. ನನಗೆ ಸಿಗದ ಅಯ್ನಾಜ್ ಯಾರಿಗೂ ಸಿಗಬಾರದು ಎಂದು ಕೊಲೆ ಮಾಡಿದ್ದಾನೆ ಎಂಬುವುದು ತನಿಖೆಯಿಂದ ಗೊತ್ತಾಗಿದೆ.








