ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ನಿಯಂತ್ರಿಸುವ ಏಕೈಕ ಶಕ್ತಿ ಯಾವುದೆಂದು ಬಹಿರಂಗಪಡಿಸಿದ್ದಾರೆ. ಅಸ್ಸಾಂನಲ್ಲಿ 18,530 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಯಾವುದೇ ಬಾಹ್ಯ ಶಕ್ತಿಗಳು ತಮ್ಮ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
“ನನ್ನ ರಿಮೋಟ್ ಕಂಟ್ರೋಲ್ 140 ಕೋಟಿ ಭಾರತೀಯರ ಕೈಯಲ್ಲಿದೆ. ಅವರ ಆಶೀರ್ವಾದವಿದ್ದರೆ ಮಾತ್ರ ನಾನು ಪ್ರಧಾನಿಯಾಗಿ ಮುಂದುವರಿಯಲು ಸಾಧ್ಯ” ಎಂದು ಮೋದಿ ಹೇಳಿದರು. ಉಗ್ರರ ಬೆದರಿಕೆ, ಅಮೆರಿಕ ಅಧ್ಯಕ್ಷರ ಎಚ್ಚರಿಕೆ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುವಾಗಲೂ ತಾವು ತಮ್ಮ ನಿರ್ಧಾರಗಳಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ಹೇಳಿದರು. ಭಾರತದ ಜನತೆಯ ಹಿತಾಸಕ್ತಿಯೇ ತಮ್ಮ ಆದ್ಯತೆ ಎಂದು ಅವರು ತಿಳಿಸಿದರು.
ಶಿವಭಕ್ತನಾಗಿ ಟೀಕೆ ಸಹಿಸುತ್ತೇನೆ: ಕಾಂಗ್ರೆಸ್ ವಿರುದ್ಧ ಮೋದಿ ಕಿಡಿ
ತಮ್ಮನ್ನು ಶಿವಭಕ್ತ ಎಂದು ಕರೆದುಕೊಂಡ ಪ್ರಧಾನಿ ಮೋದಿ, ತಮ್ಮ ವಿರುದ್ಧದ ಟೀಕೆ ಮತ್ತು ಅಪಮಾನಗಳನ್ನು ಸಹಿಸಿಕೊಂಡಿರುವುದಾಗಿ ಹೇಳಿದರು. ಆದರೆ, ಕಾಂಗ್ರೆಸ್ ಪಕ್ಷವು ಇತರರ ವಿರುದ್ಧ ಮಾಡುವ ಟೀಕೆಗಳನ್ನು ತೀವ್ರವಾಗಿ ಖಂಡಿಸಿದರು.
“ನಾನು ಶಿವನ ಭಕ್ತ. ನನ್ನ ಮೇಲೆ ಮಾಡುವ ಟೀಕೆಗಳನ್ನು ನಾನು ಸಹಿಸಿಕೊಳ್ಳುತ್ತೇನೆ. ಆದರೆ, ಇತರರ ಮೇಲೆ, ವಿಶೇಷವಾಗಿ ಭಾರತ ರತ್ನ ಪುರಸ್ಕೃತರ ಮೇಲೆ ಟೀಕೆ ಮಾಡಿದರೆ ನಾನು ಸುಮ್ಮನಿರಲ್ಲ” ಎಂದು ಅವರು ಎಚ್ಚರಿಸಿದರು. ಪ್ರಸಿದ್ಧ ಗಾಯಕ ಮತ್ತು ಅಸ್ಸಾಂನ ಹೆಮ್ಮೆ ಭೂಪೇನ್ ಹಜಾರಿಕಾ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿದಾಗ ಕಾಂಗ್ರೆಸ್ ವ್ಯಂಗ್ಯ ಮಾಡಿರುವುದನ್ನು ಅವರು ನೆನಪಿಸಿದರು. “ಮೋದಿ ಕುಣಿಯುವ ಮತ್ತು ಹಾಡುವವರಿಗೆ ಭಾರತ ರತ್ನ ಕೊಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದರು. ಈ ದೇಶದ ಕಲಾಭಿಮಾನಿಗಳು ಇದನ್ನು ಪ್ರಶ್ನಿಸಬೇಕು” ಎಂದು ಮೋದಿ ಆಗ್ರಹಿಸಿದರು.
ನನ್ನ ತಾಯಿಯನ್ನೂ ಬಿಟ್ಟಿಲ್ಲ: ಕಾಂಗ್ರೆಸ್ ವಿರುದ್ಧ ಮೋದಿ ಗಂಭೀರ ಆರೋಪ
ಕಾಂಗ್ರೆಸ್ ಪಕ್ಷದ ರಾಜಕೀಯ ಟೀಕೆಗಳು ತಮ್ಮ ತಾಯಿಯನ್ನೂ ಬಿಟ್ಟಿಲ್ಲ ಎಂದು ಪ್ರಧಾನಿ ಮೋದಿ ನೋವು ವ್ಯಕ್ತಪಡಿಸಿದರು. “ಕಾಂಗ್ರೆಸ್ ಎಲ್ಲರನ್ನೂ ಹೀಗಳೆಯುತ್ತದೆ, ರಾಜಕೀಯಕ್ಕೆ ಎಲ್ಲರನ್ನು ಬಳಸಿಕೊಳ್ಳುತ್ತದೆ. ಇದಕ್ಕೆ ನನ್ನ ತಾಯಿ ಕೂಡ ಹೊರತಾಗಿರಲಿಲ್ಲ. ಬಿಹಾರದಲ್ಲಿ ಕಾಂಗ್ರೆಸ್ ನನ್ನ ತಾಯಿ ವಿರುದ್ಧ ಎಐ ಮೂಲಕ ನಕಲಿ ವಿಡಿಯೋಗಳನ್ನು ಸೃಷ್ಟಿಸಿ ಹಂಚಿತ್ತು” ಎಂದು ಗಂಭೀರ ಆರೋಪ ಮಾಡಿದರು.
ಕಾಂಗ್ರೆಸ್ ಸರ್ಕಾರ ಈಶಾನ್ಯ ಭಾರತವನ್ನು ಕಡೆಗಣಿಸಿತ್ತು ಎಂದು ಪ್ರಧಾನಿ ಮೋದಿ ಟೀಕಿಸಿದರು. ಆದರೆ, ಬಿಜೆಪಿ ಸರ್ಕಾರವು ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದೆ ಎಂದು ಹೇಳಿದರು. ತಮ್ಮ ಸರ್ಕಾರವು ಈ ಭಾಗದಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುತ್ತಿದೆ, ಇದರಿಂದ ಭಾರತದ ಒಟ್ಟಾರೆ ಪ್ರಗತಿಗೆ ಸಹಾಯವಾಗುತ್ತಿದೆ ಎಂದು ವಿವರಿಸಿದರು.








