ನೆಲಮಂಗಲ: ದೇಶದಲ್ಲೆಡೆ ಕೋರೊನಾ ವೈರಸ್ ಮಹಾಮಾರಿ ಹರಡುತ್ತಿದ್ದು ನಿಯಂತ್ರಣ ಮಾಡಲು ಸರ್ಕಾರ ಶ್ರಮಿಸುತ್ತಿದೆ. ಆದರೆ ಕೊರೊನಾ ವಾರಿಯರ್ ಎಂದೇ ಕಳೆಸಿಕೊಳ್ಳುವ ವೈದ್ಯರೊಬ್ಬರು ಜಿಲ್ಲಾಧಿಕಾರಿಗಳ ಆದೇಶವನ್ನೂ ಮೀರಿ ಗಣಪತಿ ವಿಸರ್ಜನೆ ಮಾಡುವ ವೇಳೆ ಸಾಮಾಜಿಕ ಅಂತರ, ಮಾಸ್ಕ್ ಧರಿಸದೆ ನೃತ್ಯ ಮಾಡಿದ ತಪ್ಪಿಗೆ ಕೇಸ್ ಎದುರಿಸುವಂತಾಗಿದೆ.
ನೃತ್ಯ ಮಾಡಿದ್ದ ವೈದ್ಯ ಡಾ.ಚಂದ್ರಶೇಖರ್ ವಿಡಿಯೋವನ್ನು ಅವರೇ ಸ್ವತಃ ಅವರ ಫೇಸ್ಬುಕ್ ಪೇಜ್ನಲ್ಲಿ ಹಂಚಿಕೊಡಿದ್ದರು. ಈ ನೃತ್ಯದ ದೃಶ್ಯ ಆಧರಿಸಿ ವೈದ್ಯರು ಸೇರಿ 27 ಜನರ ವಿರುದ್ಧ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯ ನಿಡವಂದ ಗ್ರಾಮದಲ್ಲಿ ಆ.24 ರಂದು ಗಣಪತಿಯನ್ನು ವಿಸರ್ಜನೆ ಮಾಡಲಾಗಿತ್ತು. ಈ ವೇಳೆ ಆರೋಗ್ಯ ಭಾರತಿ ಆಸ್ಪತ್ರೆಯ ಸಂಸ್ಥಾಪಕ ಹಾಗೂ ವೈದ್ಯ ಡಾ.ಚಂದ್ರಶೇಖರ್ ಊರಿನ ಗ್ರಾಮಸ್ಥರು ಹಾಗೂ ಯುವಕರು ವೈದ್ಯರನ್ನು ಹೆಗಲ ಮೇಲೆ ಎತ್ತಿ ನೃತ್ಯ ಮಾಡಿಸಿದ್ದಾರೆ. ಇದನ್ನು ಆ.26 ರಂದು ಡಾ.ಚಂದ್ರಶೇಖರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಜಿಲ್ಲಾಧಿಕಾರಿಗಳು ಈ ಮೊದಲೇ ಯಾವುದೇ ಕಾರಣಕ್ಕೂ ಗಣಪತಿ ವಿಸರ್ಜಿಸುವ ಸಂದರ್ಭದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸರಬೇಕು. ಯಾವುದೇ ಕಾರಣಕ್ಕೂ ನೃತ್ಯ, ಡಿಜೆ, ವಾದ್ಯ, ಆರ್ಕೆಸ್ಟ್ರಾ ಸೇರಿದಂತೆ ಯಾವುದೇ ರೀತಿಯ ಆಡಂಬರಗಳಿಗೆ ಅವಕಾಶವಿಲ್ಲ ಎಂದು ಆದೇಶ ಹೊರಡಿಸಿದ್ದರು. ಆದರೂ ಇಲ್ಲಿ ಗಣೇಶ ವಿಸರ್ಜನೆ ಮಾಡುವ ಸಂದರ್ಭದಲ್ಲಿ ನೃತ್ಯ ಮಾಡಿರುವುದು ಎಷ್ಟು ಸರಿ ಎಂದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಕೊರೊನಾ ವಾರಿಯರ್ ಆಗಿ ರೋಗ ನಿಯಂತ್ರಿಸಲು ಶ್ರಮಿಸುತ್ತಿರುವ ವೈದ್ಯರೇ ಈ ರೀತಿ ನೃತ್ಯ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ರೀತಿಯ ನೃತ್ಯ ಮಾಡುವುದಕ್ಕೆ ಪೆÇಲೀಸರು ಅವಕಾಶ ನೀಡಿರುವುದು ತಪ್ಪು ಎಂದು ಪೆÇಲೀಸರು ಹಾಗೂ ವೈದ್ಯರ ವಿರುದ್ದ ಜಾಲತಾಣಗಳಲ್ಲಿ ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದಾರೆ.
ನೃತ್ಯ ಮಾಡಿದ ಡಾ.ಚಂದ್ರಶೇಖರ್, ಗ್ರಾಮಸ್ಥರಾದ ಚಿಕ್ಕೇಗೌಡ, ಚಿಕ್ಕಣ್ಣ, ಪರಮೇಶ್, ಮರಿಯಣ್ಣ, ಕುಮಾರ, ಬಸವರಾಜು, ವಿನಯ್, ಕೆಂಪರಾಜು, ಗಂಗರಾಜು, ರಾಮಣ್ಣ, ವಿನಯ್ಪ್ರಸಾದ್, ವಿನೋದ್, ರವಿ, ಶರತ್, ಕಿರಣ್, ಶಿವರಾಜು, ಬಸವರಾಜು, ಹರೀಶ್, ಸಿದ್ದರಾಜು, ವಾಸಣ್ಣ, ಕಾಂತರಾಜು, ಕೃಷ್ಣಮೂರ್ತಿ, ವಿಜಯ್ಕುಮಾರ್, ನಂದೀಶ್ ಸೇರಿದಂತೆ 27 ಜನರ ಮೇಲೆ ದಾಬಸ್ ಪೇಟೆ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ಆರೋಗ್ಯ ಭಾರತಿ ಆಸ್ಪತ್ರೆಯ ಸಂಸ್ಥಾಪಕ ಡಾ.ಚಂದ್ರಶೇಖರ್ ಪ್ರತಿಕ್ರಿಯಿಸಿ ನಾನು ನಿಡವಂದ ಗ್ರಾಮದಲ್ಲಿ ಅನಾರೋಗ್ಯವಿದ್ದ ವ್ಯಕ್ತಿಯೊಬ್ಬರಿಗೆ ಚಿಕಿತ್ಸೆ ನೀಡಲು ಹೋದಾಗ ಅಲ್ಲಿನ ಗ್ರಾಮಸ್ಥರು ಕಾರನ್ನು ಅಡ್ಡಹಾಕಿ ಬೇಡ ಎಂದರೂ ಕಾರಿನಿಂದ ಬಲವಂತಾಗಿ ಇಳಿಸಿ ನೃತ್ಯ ಮಾಡಿಸಲು ಹೆಗಲ ಮೇಲೆ ಎತ್ತಿಕೊಂಡು ಕುಣಿಸಿದರು ಎಂದು ಸ್ಪಷ್ಟನೆ ನೀಡಿದ್ದಾರೆ.