ಹರಿಯಾಣ, ಮೇ 19 : ಲಾಕ್ ಡೌನ್ ಹಿನ್ನೆಲೆಯಲ್ಲಿ ಉದ್ಯೋಗ ಕಳೆದು ಕೊಂಡಿರುವ ಕಾರ್ನಾಲ್ ನ ವೈದ್ಯರೊಬ್ಬರು ವೈದ್ಯನ ವಸ್ತ್ರಗಳನ್ನೇ ಧರಿಸಿ ತಳ್ಳುವ ಗಾಡಿಯಲ್ಲಿ ಚಹಾ ಮಾರಾಟ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಡಾ. ಗೌರವ್ ಶರ್ಮಾ ಅವರು ವೈದ್ಯರ ಉಡುಪಿನಲ್ಲಿ ಕಳೆದ ಎರಡು ದಿನಗಳಿಂದ ರಸ್ತೆಯಲ್ಲಿ ತಮ್ಮ ಪತ್ನಿಯೊಂದಿಗೆ ಚಹಾ ಮಾರಾಟ ಮಾಡುವ ಮೂಲಕ ಪ್ರತಿಭಟನೆ ಮಾಡುತ್ತಿದ್ದು, ತಮ್ಮ ಅಸಮಾಧಾನ ಮತ್ತು ಸಮಸ್ಯೆಗಳ ಬಗ್ಗೆ ಉನ್ನತ ಮಟ್ಟದಲ್ಲಿ ಗಮನ ಸೆಳೆಯಲು ವಿನೂತನ ರೀತಿಯ ಪ್ರತಿಭಟನೆಗೆ ಮುಂದಾಗಿದ್ದಾರೆ. ಈಗಾಗಲೇ ತಮ್ಮ ಸಮಸ್ಯೆಯ ಬಗ್ಗೆ ಸಂಬಂಧಪಟ್ಟವರಿಗೆ ದೂರನ್ನು ಸಲ್ಲಿಸಿದ್ದು, ಅವರಿಂದ ಯಾವುದೇ ರೀತಿಯ ನೆರವು ದೊರೆಯದ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ಡಾ.ಗೌರವ್ ಅವರು ಕಂಪನಿಯೊಂದರ ಮೂಲಕ ಆಸ್ಪತ್ರೆಯಲ್ಲಿ ಉದ್ಯೋಗವನ್ನು ಪಡೆದಿದ್ದು, ಆಸ್ಪತ್ರೆ ಅವರಿಗೆ ಕಳೆದ ಎರಡು ತಿಂಗಳಿನಿಂದ ಸಂಬಳವನ್ನು ಕೂಡ ಪಾವತಿಸಿಲ್ಲ. ಅಷ್ಟೇ ಅಲ್ಲ ಅವರುಬನಾಲ್ಕು ತಿಂಗಳು ಓವರ್ ಟೈಮ್ ಮಾಡಿದ್ದು, ಆ ಹಣವನ್ನು ಕೂಡ ನೀಡಿಲ್ಲ. ಕಳೆದ ಡಿಸೆಂಬರ್ ನಲ್ಲಷ್ಟೇ ವಿವಾಹವಾಗಿರುವ ಡಾ.ಗೌರವ್, ಮನೆಯ ಖರ್ಚುಗಳನ್ನು ನಿಭಾಯಿಸಲು ಕಷ್ಟ ಪಡುತ್ತಿದ್ದಾರೆ. ಬಾಡಿಗೆ ಮನೆಯಲ್ಲಿ ವಾಸವಾಗಿರುವ ಇವರು ಮನೆಯ ಬಾಡಿಗೆ ಕೊಡಲು ಒದ್ದಾಡುತ್ತಿದ್ದು, ಕೆಲಸವಿಲ್ಲದೆ ಬಹಳ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.ಒಂದೆಡೆ ಕೊರೊನಾ ಸೋಂಕನ್ನು ತಡೆಗಟ್ಟಲು ಶ್ರಮಿಸುತ್ತಿರುವ ವೈದ್ಯರನ್ನು ಕೊರೊನಾ ವೀರರು ಎಂದು ಕರೆದು ದೇಶ ಗೌರವ ಸಲ್ಲಿಸುತ್ತಿರಬೇಕಾದರೆ, ಇನ್ನೊಂದೆಡೆ ವೈದ್ಯರನ್ನು ಉದ್ಯೋಗದಿಂದ ತೆಗೆದು ಸಂಕಷ್ಟಕ್ಕೆ ಗುರಿ ಮಾಡುತ್ತಿರುವುದು ನಿಜಕ್ಕೂ ದುರದೃಷ್ಟಕರ.