ಬೆಂಗಳೂರು: ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡದೇ ತಪ್ಪಿಸಿಕೊಂಡಿರುವ ವೈದ್ಯರು ಹಾಗೂ ನರ್ಸ್‍ಗಳ ಲೈಸೆನ್ಸ್ ಹಾಗೂ ನೋಂದಣಿಯನ್ನು ಅಮಾನತು ಮಾಡುವ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ನಗರದ ಕೋವಿಡ್ ಉಸ್ತುವಾರಿ ಕೇಂದ್ರಗಳಲ್ಲಿ ಪರಿಶೀಲನೆ ನಡೆಸಿದ ಬಳಿಕ ಅಧಿಕಾರಿಗಳ ಜತೆ ಸಭೆ ನಡೆಸಿ ಈ ಖಡಕ್ ಸೂಚನೆ ನೀಡಿದ್ದಾರೆ.
ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿ ಸಮರೋಪಾದಿಯಲ್ಲಿ ಚಿಕಿತ್ಸೆ ನೀಡಬೇಕಾದ ಹೊಣೆ ವೈದ್ಯರ ಮೇಲಿದೆ. ಚಿಕಿತ್ಸೆ ನೀಡಲು ವೈದ್ಯರು ಹಾಗೂ ನರ್ಸ್‍ಗಳು ನಿರ್ಲಕ್ಷ್ಯ ಧೋರಣೆ ತಾಳಿರುವುದು ಅಮಾನವೀಯ. ಪರಿಸ್ಥಿತಿ ಹೀಗೇ ಮುಂದುವರೆದರೆ ಕೈಮೀರಿ ಹೋಗಲಿದೆ ಎಂದು ಡಿಸಿಎಂ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರ ಕೊರತೆ ಎದುರಾಗಿದೆ. ಕೊರೊನಾ ಕೆಲಸದಿಂದ ಪಲಾಯನ ಮಾಡಿರುವ ವೈದ್ಯರು ಹಾಗೂ ನರ್ಸ್‍ಗಳನ್ನು ಗುರುತಿಸಿ ಅವರನ್ನು ಕೂಡಲೇ ವೃತ್ತಿಯಿಂದಲೇ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಮೆಡಿಕಲ್ ಕೌನ್ಸಿಲ್ ಹಾಗೂ ನರ್ಸಿಂಗ್ ಕೌನ್ಸಿಲ್‍ಗೆ ಸೂಚನೆ ನೀಡಲಾಗಿದೆ ಎಂದರು.
ವೈದ್ಯರು ಹಾಗೂ ನರ್ಸ್‍ಗಳಿಗೆ ಸರ್ಕಾರ ಎಲ್ಲಾ ರೀತಿಯ ರಕ್ಷಣೆ ನೀಡುತ್ತಿದೆ. ಅದು ಬಿಟ್ಟು ವೃತ್ತಿಗೆ ದ್ರೋಹ ಬಗೆದು ಸೋಂಕಿತರನ್ನು ನಡು ನೀರಿನಲ್ಲಿ ಬಿಟ್ಟು ಪಲಾಯನ ಮಾಡುವುದು ತಪ್ಪು. ಇದು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಸೇವೆಗೆ ಹಾಜರಾಗದ ವೈದ್ಯರು, ನರ್ಸ್ ಹಾಗೂ ಪೂರಕ ಸಿಬ್ಬಂದಿಗಳ ಹೆಸರುಗಳ ಸಮೇತ ಪ್ರಕಟಿಸಲಾಗುವುದು ಎಂದು ಅಶ್ವತ್ಥ ನಾರಾಯಣ ಎಚ್ಚರಿಕೆ ನೀಡಿದ್ದಾರೆ.
25 ವೈದ್ಯರ ಕೊರತೆ..!
ಬೆಂಗಳೂರು ನಗರದ ಕೋವಿಡ್ ಕೇರ್ ಕೇಂದ್ರಗಳಲ್ಲಿ 2624 ಹಾಸಿಗೆಗಳಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಕೇಂದ್ರಗಳಿಗೆ 86 ವೈದ್ಯರ ಅಗತ್ಯವಿದೆ. ಆದರೆ ಸದ್ಯ 61 ವೈದ್ಯರು ಲಭ್ಯವಿದ್ದಾರೆ. ಹೀಗಾಗಿ ಇನ್ನೂ 25 ವೈದ್ಯರ ಕೊರತೆ ಇದೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ವಿವರ ನೀಡಿದ್ದಾರೆ.
ಕೋವಿಡ್ ಕೇರ್ ಸೆಂಟರ್‍ಗಳಿಗೆ 134 ನರ್ಸ್‍ಗಳ ಅಗತ್ಯವಿದ್ದು, ಕೇವಲ 54 ಮಂದಿ ಲಭ್ಯವಿದ್ದಾರೆ. ಹೀಗಾಗಿ ವೈದ್ಯರು ಹಾಗೂ ನರ್ಸ್‍ಗಳ ಮೇಲೆ ಒತ್ತಡ ಹೆಚ್ಚುತ್ತಿದೆ ಎಂದರು.
ಕೋವಿಡ್ ಕೇರ್ ಕೇಂದ್ರಗಳಲ್ಲಿ ನಿರ್ಲಕ್ಷ್ಯ
ಡಿಸಿಎಂ ಅಶ್ವತ್ಥ ನಾರಾಯಣ ಅವರು ನಗರದ ಕೋವಿಡ್ ಕೇಂದ್ರಗಳಿಗೆ ಭೇಟಿ ನೀಡಿದ ವೇಳೆ ಜಿಕೆವಿಕೆಯ ಕೇಂದ್ರದಲ್ಲಿ ಸಿಬ್ಬಂದಿ ಹಾಗೂ ವೈದ್ಯರ ನಿರ್ಲಕ್ಷ್ಯ ಕಂಡು ಬಂತು. ಸೋಂಕಿತರಿಗೆ ಚಿಕಿತ್ಸೆ, ಊಟ ಹಾಗೂ ಬಿಸಿ ನೀರಿನ ವ್ಯವಸ್ಥೆ ಮಾಡದೇ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಡಿಸಿಎಂಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಕೆವಿಕೆ ಕೇರ್ ಸೆಂಟರ್‍ನ ಉಸ್ತುವಾರಿ ಅಧಿಕಾರಿ ಹಾಗೂ ವೈದ್ಯರ ವಿರುದ್ಧ ಕೇಸ್ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.