ವಿಜಯಪುರ: ಇಲ್ಲಿಯ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಮಾಡಿದ ಯಡವಟ್ಟಿಗೆ ಬಾಣಂತಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.
ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದ ನಂತರ ಬಾಣಂತಿಯೊಬ್ಬರಿಗೆ ರಕ್ತಸ್ರಾವವಾಗಿತ್ತು. ಆದರೆ, ವೈದ್ಯರು ಅಚಾತುರ್ಯ ಮೆರೆದು, A+ ರಕ್ತದ ಬದಲು B+ ರಕ್ತ ನೀಡಿದ್ದಾರೆ. ಪರಿಣಾಮವಾಗಿ ಬಾಣಂತಿ ಸಾವನ್ನಪ್ಪಿದ್ದಾರೆ.
ಬಬಲೇಶ್ವರ ತಾಲೂಕಿನ ದದಾಮಟ್ಟಿ ಗ್ರಾಮದ ಶಾರದಾ ದೊಡಮನಿ ಮೃತ ದುರ್ದೈವಿ. ಸಾವನ್ನಪ್ಪಿದ ತಾಯಿ, ಒಂದು ಹೆಣ್ಣು, ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ವೇಳೆ ರಕ್ತಸ್ರಾವವಾಗಿತ್ತು. ಹೀಗಾಗಿ ಆಸ್ಪತ್ರೆ ನರ್ಸಿಂಗ್ ಆಪೀಸರ್ಸ್, ಎ ಪಾಸಿಟವ್ ರಕ್ತದ ಗುಂಪು ಹೊಂದಿದ್ದ ಬಾಣಂತಿ ಶಾರದಾ ಅವರಿಗೆ ಒಂದು ಯುನೀಟ್ ಬಿ ಪಾಸಿಟಿವ್ ರಕ್ತವನ್ನು ಕೊಟ್ಟಿದ್ದಾರೆ. ಟಿಬಿ ಖಾಯಿಲೆಯಿಂದ ಬಳಲುತ್ತಿದ್ದ ಶಾರದಾಗೆ ರಕ್ತ ನೀಡುತ್ತಿದ್ದಂತೆ
ತೀವ್ರ ಅಸ್ವಸ್ಥರಾಗಿದ್ದಾರೆ.
ಆ ನಂತರ ವೈದ್ಯರು ನಗರದ ಬಿಎಲ್ಡಿಇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, 26 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಶಾರದಾ ಸಾವನ್ನಪ್ಪಿದ್ದಾರೆ. ಅವಳಿ ಜವಳಿ ಮಕ್ಕಳಿಗೆ ಬಿಎಲ್ಡಿಇ ಆಸ್ಪತ್ರೆಯಲ್ಲಿ ಆರೈಕೆ ಮಾಡಲಾಗುತ್ತಿದೆ. ಕುಟುಂಬಸ್ಥರು ಜಿಲ್ಲಾಸ್ಪತ್ರೆ ವೈದ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇಬ್ಬರು ಸಿಬ್ಬಂದಿಯನ್ನು ಆಸ್ಪತ್ರೆಯಿಂದ ಅಮಾನತು ಮಾಡಲಾಗಿದೆ.