ಅಮೆರಿಕ ನಿಜವಾಗಿಯೂ ಭಾರತವನ್ನು ಪ್ರೀತಿಸುತ್ತದೆಯೇ?
ಹೊಸದಿಲ್ಲಿ, ಜುಲೈ 8: ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತವನ್ನು ಪ್ರೀತಿಸುತ್ತಾರೆ ಎಂದು ಈಗ ಇಡೀ ಜಗತ್ತಿಗೆ ತಿಳಿದಿದೆ. ನಿಯಮಿತವಾಗಿ ಟ್ರಂಪ್ ಭಾರತ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಪ್ರೀತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಮಾತಿಗಿಂತ ಕೃತಿ ಮುಖ್ಯ ಎಂಬ ಮಾತಿನಂತೆ ಮಾತನಾಡುವುದಕ್ಕಿಂತ ಮಾಡಿ ತೋರಿಸುವುದು ಮುಖ್ಯ.
ಆದರೆ ಟ್ರಂಪ್ ಅವರ ಮಾತಿಗೂ ಮತ್ತು ಅವರ ಕಾರ್ಯಗಳಿಗೆ ಹೊಂದಿಕೆಯಾಗುವುದಿಲ್ಲ. ಕಳೆದ 20 ದಿನಗಳಲ್ಲಿ ಟ್ರಂಪ್ ಆಡಳಿತ ಕೈಗೊಂಡ 2 ದೊಡ್ಡ ನಿರ್ಧಾರಗಳು ಭಾರತ ವಿರುದ್ಧವಾಗಿವೆ. ಅವರು ನಿರ್ದಿಷ್ಟವಾಗಿ ಭಾರತವನ್ನು ಗುರಿಯಾಗಿಸದೇ ಆ ನಿರ್ಧಾರ ತೆಗೆದುಕೊಂಡಿದ್ದರೂ ಆದರ ಪರಿಣಾಮ ಭಾರತದಲ್ಲಿ ಗಣನೀಯವಾಗಿರುತ್ತದೆ.
ಇತ್ತೀಚೆಗೆ ಅಂದರೆ, ಜುಲೈ 4, 2020 ರಂದು, ಅಮೆರಿಕದ 244 ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿಯವರ ಟ್ವೀಟ್ಗೆ ಪ್ರತಿಕ್ರಿಯಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಧನ್ಯವಾದಗಳು, ನನ್ನ ಸ್ನೇಹಿತ. ಅಮೆರಿಕ ಭಾರತವನ್ನು ಪ್ರೀತಿಸುತ್ತದೆ! ‘ ಎಂದು ಹೇಳಿದ್ದರು.
2 ದಿನಗಳ ಬಳಿಕ ಅಂದರೆ ಜುಲೈ 6 ರಂದು, ಅಮೆರಿಕ ವಲಸೆ ಮತ್ತು ಸುಂಕ ನಿರ್ದೇಶನಾಲಯ, ವಲಸೆರಹಿತ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ವಿನಾಯಿತಿಗಳನ್ನು ಮಾರ್ಪಡಿಸುವ ಕುರಿತು ಹೇಳಿಕೆ ನೀಡಿದೆ.ಇದರಿಂದ ಅಮೆರಿಕದಲ್ಲಿರುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಗಳು ಸೂಚಿಸುವ ಆನ್ ಲೈನ್ ಕೋರ್ಸ್ಗಳನ್ನು ತೆಗೆದುಕೊಳ್ಳುತ್ತಿದ್ದರೆ, ಅವರು ಅಮೆರಿಕವನ್ನು ಬಿಡಬೇಕಾಗಬಹುದು. ಕೋವಿಡ್-19 ಭೀತಿಯ ಹಿನ್ನಲೆಯಲ್ಲಿ ಆನ್ ಲೈನ್ ನಲ್ಲಿ ಕೋರ್ಸ್ ಗಳನ್ನು ತೆಗೆದುಕೊಳ್ಳುತ್ತಿರುವ ವಲಸೆಯೇತರ ಎಫ್-1 ಮತ್ತು ಎಂ-1 ವಿದ್ಯಾರ್ಥಿಗಳು ಆನ್ ಲೈನ್ ಕೋರ್ಸ್ ಗಳಿಸಲು ಸಾಧ್ಯವಿಲ್ಲ. ಅವರು ದೇಶ ಬಿಟ್ಟು ಹೋಗಬೇಕು ಇಲ್ಲವೇ ಕಾನೂನು ಮಾನ್ಯತೆ ಪಡೆದು ಬೇರೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಮೆರಿಕ ವಲಸೆ ಮತ್ತು ಸುಂಕ ನಿರ್ದೇಶನಾಲಯ ಹೇಳಿಕೆಯಲ್ಲಿ ತಿಳಿಸಿದೆ. ಈಗಾಗಲೇ ವಿಶ್ವವಿದ್ಯಾಲಯಗಳಿಗೆ ಆನ್ ಲೈನ್ ನಲ್ಲಿ ಕೋರ್ಸ್ ಗಳನ್ನು ಪಡೆಯುತ್ತಿರುವ ವಿದ್ಯಾರ್ಥಿಗಳ ವಿವರಗಳನ್ನು ನೀಡುವಂತೆ ಸೂಚಿಸಿದೆ.
ಈ ಅಧಿಸೂಚನೆಯು ಅಮೆರಿಕಾದಲ್ಲಿ ಅಧ್ಯಯನ ನಡೆಸುವ ಕನಸಿನೊಂದಿಗೆ ಹೋದ ಭಾರತೀಯ ವಿದ್ಯಾರ್ಥಿಗಳಲ್ಲಿ ಭೀತಿಯನ್ನು ಹುಟ್ಟುಹಾಕಿದೆ.
ವರದಿಯ ಪ್ರಕಾರ, ಯುಎಸ್ ಕಾಲೇಜುಗಳಲ್ಲಿ ಸುಮಾರು 5.5% ವಿದೇಶಿ ವಿದ್ಯಾರ್ಥಿಗಳನ್ನು ವ್ಯಾಸಂಗ ಮಾಡುತ್ತಿದ್ದಾರೆ. ಈ ಅಧಿಸೂಚನೆಯು ವಿದ್ಯಾರ್ಥಿಗಳಲ್ಲಿ ಸಾಕಷ್ಟು ಅನಿಶ್ಚಿತತೆಯನ್ನು ತಂದಿದೆ.
ಜೂನ್ನಲ್ಲಿ ಟ್ರಂಪ್ ಆಡಳಿತ 2020 ರ ಡಿಸೆಂಬರ್ ವರೆಗೆ ಯುಎಸ್ ಹೊಸ ಎಚ್ 1-ಬಿ ಮತ್ತು ಎಲ್ 1 ವೀಸಾಗಳನ್ನು ನೀಡುವುದಿಲ್ಲ ಎಂದು ಘೋಷಿಸಿ ಭಾರತಕ್ಕೆ ಮತ್ತೊಂದು ದೊಡ್ಡ ಆಘಾತವನ್ನು ನೀಡಿತ್ತು. ಯುಎಸ್ ನ ವಲಸೆ ಮಾಹಿತಿಯ ಪ್ರಕಾರ, 85,000 ಎಚ್ -1 ಬಿ ವೀಸಾಗಳಲ್ಲಿ ಭಾರತಕ್ಕೆ 70% ವರ್ಷಕ್ಕೆ ನೀಡಲಾಗುತ್ತದೆ.
ಇದೆಲ್ಲವನ್ನೂ ಗಮನಿಸುವಾಗ ಡೊನಾಲ್ಡ್ ಟ್ರಂಪ್ ಅವರ ಪ್ರೀತಿಯ ಗುಲಾಬಿಯೊಂದಿಗೆ ದೊಡ್ಡ ಮುಳ್ಳುಗಳು ಇರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಟ್ರಂಪ್ ಗೆ, ಯಾವಾಗಲೂ ‘ಅಮೇರಿಕಾ ಫಸ್ಟ್’ ಆಗಿರುತ್ತದೆ ಮತ್ತು ಅವರ ಕಾರ್ಯಗಳು ಯಾವಾಗಲೂ ಭಾರತ ಮತ್ತು ಭಾರತೀಯರ ಮೇಲಿನ ಪ್ರೀತಿಯನ್ನು ಬೇಷರತ್ತಾಗಿಲ್ಲ ಎಂದು ಸೂಚಿಸುತ್ತದೆ.