ಬೀದಿ ನಾಯಿಗಳ ವಿಷಯದಲ್ಲಿ ಸುದ್ದಿಯಾಗುತ್ತಿದ್ದ ಬೆಂಗಳೂರು ಈ ಭಾರಿ ಸಾಕು ನಾಯಿಗಳ ವಿಚಾರದಲ್ಲಿ ಸುದ್ದಿಯಾಗುತ್ತಿದೆ.
ಇನ್ನು ಮುಂದೆ ಬೆಂಗಳೂರಿನಲ್ಲಿ ಸಾಕು ನಾಯಿಯನ್ನ ಸಾಕಲು ಬಿ ಬಿ ಎಂ ಪಿ ಯಿಂದ ಅನುಮತಿ ಪಡೆಯಬೇಕಿದೆ. ಈಗೊಂದು ನಿಯಮವನ್ನ ತರಬೇಕು ಎನ್ನುವ ಬಿಬಿಎಂಪಿ ನಿರ್ಧಾರ ಶ್ವಾನ ಪ್ರಿಯರಲ್ಲಿ ಚರ್ಚೆಯನ್ನ ಹುಟ್ಟು ಹಾಕಿದೆ.
ಬೃಹತ್ ಮಹಾನಗರ ಪಾಲಿಕೆ ನಾಯಿಗಳನ್ನ ಸಾಕಲು ಲೈಸೆನ್ಸ್ ಕಡ್ಡಾಯಗೊಳಿಸಿದೆ. ನಾಯಿಯ ಜೊತೆ ಮಾಲಿಕರು ಸಹ ಕಡ್ಡಾಯ ನೊಂದಾವಣಿ ಮಾಡಿಕೊಳ್ಳಬೇಕಿದೆ. ಈ ನಿಯಮದ ಕರಡು ಪ್ರತಿ ಸಿದ್ಧವಾಗಿದೆ. ಇದನ್ನ 15 ದಿನಗಳಲ್ಲಿ ಪ್ರಕಟಿಸಲಾಗುತ್ತದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗುತ್ತದೆ.
ನಾಯಿಗಳನ್ನು ಸಾಕಲು ಶುಲ್ಕ ಕಟ್ಟಬೇಕು. ಲೈಸೆನ್ಸ್ ನೀಡಿ, ನಾಯಿಗಳಿಗೆ ಮೈಕ್ರೋ ಚಿಪ್ ನೀಡಲಾಗುತ್ತದೆ. ನಿಯಮ ಜಾರಿಗೆ ಬಂದ ಮೊದಲ ವರ್ಷದಲ್ಲಿ ಲೈಸೆನ್ಸ್ ನವೀಕರಣ ಸಹ ಮಾಡಲಾಗುತ್ತದೆ. ಲೈಸೆನ್ಸ್ ಪಡೆದ ನಾಯಿಗೆ ನೋಂದಣಿ ಸಂಖ್ಯೆ ಸಹ ನೀಡಲಾಗುತ್ತದೆ.
ಪ್ರಮುಖವಾಗಿ ಸಾರ್ವಜನಿಕ ಸ್ಥಳಗಳಲ್ಲಿ ನಾಯಿಗಳು ಮಲ, ಮೂತ್ರ ಮಾಡಿದರೆ ಮಾಲೀಕರು ಸ್ವಚ್ಛಗೊಳಿಸಬೇಕು. ನಾಯಿಗಳ ನೋಂದಣಿ ಮಾಡಿಸದಿದ್ದರೆ ರೂ. 1000 ದಂಡ ಹಾಕಲಾಗುತ್ತದೆ. ನೋಂದಣಿ ಮಾಡಿಸುವ ತನಕ ಪ್ರತಿ ತಿಂಗಳು 300 ರೂ. ದಂಡ ಕಟ್ಟಬೇಕು.