ಗೃಹಬಳಕೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 50 ರೂ ಹೆಚ್ಚಳ…
LPG ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಸರ್ಕಾರ ಹೆಚ್ಚಿಸಿದ್ದು, ಜನಸಾಮಾನ್ಯರಿಗೆ ಮತ್ತೊಮ್ಮೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. 14.2 ಕೆಜಿಯ ಗೃಹಬಳಕೆಯ ಸಿಲಿಂಡರ್ 50 ರೂ. ಹೆಚ್ಚಿಸಲಾಗಿದ್ದು, ಇಂದಿನಿಂದ ದೆಹಲಿಯಲ್ಲಿ ಗೃಹೋಪಯೋಗಿ ಸಿಲಿಂಡರ್ ಬೆಲೆ 999.50 ರೂ.ಗೆ ತಲುಪಿದೆ.
ಈ ತಿಂಗಳ ಆರಂಭದಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಲಾಗಿತ್ತು. ಮೇ 1 ರಂದು, ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯಲ್ಲಿ 102.50 ರೂ ಹೆಚ್ಚಳ ಮಾಡುವ ಮೂಲಕ 2355.50 ರೂ ಕ್ಕೆ ಏರಿಸಲಾಗಿತ್ತು. ಅಲ್ಲದೆ, 5 ಕೆ.ಜಿ ಸಿಲಿಂಡರ್‌ನ ಬೆಲೆಯನ್ನು 655 ರೂ ಕ್ಕೆ ಏರಿಸಲಾಗಿತ್ತು.
ಏಪ್ರಿಲ್ 1 ರಂದು, 19 ಕೆ.ಜಿ ವಾಣಿಜ್ಯ ಬಳಕೆಯ ಎಲ್‍ಪಿಜಿ ಪ್ರತಿ ಸಿಲಿಂಡರ್ ಬೆಲೆಯಲ್ಲಿ 250ರೂ. ಏರಿಕೆ ಮಾಡಲಾಗಿತ್ತು. ಮಾರ್ಚ್ 1 ರಂದು ವಾಣಿಜ್ಯ ಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆಯಲ್ಲಿ 105ರೂ. ರಷ್ಟು ಹೆಚ್ಚಳವಾಗಿತ್ತು.
ದೇಶದಲ್ಲಿ ಈಗಾಗಲೇ ಹಣದುಬ್ಬರದಿಂದ ಕಂಗಾಲಾಗಿರುವ ಶ್ರೀಸಾಮಾನ್ಯನಿಗೆ ಮತ್ತೆ ಬೆಲೆ ಏರಿಕೆ ಶಾಕ್ ನೀಡಿದೆ.