ಕೊರೊನಾ ಚಿಕಿತ್ಸೆಗೆ ದೇಶೀಯ ಔಷಧ ಕಂಪನಿಯ ಲಸಿಕೆ ರೆಡಿ
ಹೊಸದಿಲ್ಲಿ, ಜೂನ್ 23: ಪ್ರಧಾನಿ ನರೇಂದ್ರ ಮೋದಿಯವರ ಸ್ವಾವಲಂಬಿ ಭಾರತ ಕರೆಗೆ ಓಗೊಟ್ಟು ಕೊರೊನಾ ಚಿಕಿತ್ಸೆಗೆ ಬಳಸಲಾಗುವ ಲಸಿಕೆಯನ್ನು ದೇಶೀಯ ಔಷಧ ಕಂಪನಿ ಭಾರತದಲ್ಲಿಯೇ ತಯಾರಿಸಿದೆ. ದೇಶೀಯ ಔಷಧ ಕಂಪನಿ ಹೆಟೆರೋ ಕೊರೊನಾ ಚಿಕಿತ್ಸೆಗಾಗಿ ಕೋವಿಫೊರ್ ಎಂಬ ಲಸಿಕೆಯನ್ನು ತಯಾರಿಸಿರುವುದಾಗಿ ಘೋಷಿಸಿದ್ದು, ಇದಕ್ಕೆ ಭಾರತೀಯ ಔಷಧ ಮಹಾನಿಯಂತ್ರಕರು ಪರವಾನಗಿ ನೀಡಿದ್ದಾರೆ ಎಂದು ತಿಳಿಸಿದೆ. ಔಷಧ ಕಂಪನಿಯ ಮುಖ್ಯಸ್ಥ ಡಾ. ಬಿ. ಪಾರ್ಥಸಾರಥ ರೆಡ್ಡಿ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಾಣುತ್ತಿರುವ ಈ ಸಂದರ್ಭದಲ್ಲಿ ಚಿಕಿತ್ಸೆಗೆ ಲಸಿಕೆ ಸಜ್ಜುಗೊಂಡಿರುವುದು ಭಾರಿ ಅನುಕೂಲಕರವಾಗಲಿದೆ ಎಂದರು. ಇಷ್ಟರಲ್ಲೇ ದೇಶದಾದ್ಯಂತ ಕೊರೊನಾ ಚಿಕಿತ್ಸೆಗೆ ಈ ಲಸಿಕೆ ಲಭ್ಯವಾಗಲಿದೆ ಎಂದು ಅವರು ಹೇಳಿದರು.
ಅಮೆರಿಕದ ರೆಮ್ಡೆಸಿವಿರ್ ಲಸಿಕೆಯ ಭಾರತೀಯ ಅವತರಣಿಕೆಯಾಗಿರುವ ಕೋವಿಫೊರ್ ಲಸಿಕೆಯನ್ನು ಜನರಿಕ್ ಔಷಧ ರೂಪದಲ್ಲಿ ಉತ್ಪಾದಿಸಲಾಗಿದೆ. ರೆಮ್ಡೆಸಿವಿರ್ ಅನ್ನು ತುರ್ತು ಸಂದರ್ಭದಲ್ಲಿ ಕೊರೊನಾ ರೋಗಿಗಳಿಗೆ ನೀಡಲು ಭಾರತದಲ್ಲಿ ಶಿಫಾರಸು ಮಾಡಲಾಗಿತ್ತು. ಇದೀಗ ಇದನ್ನು ದೇಶೀಯ ಔಷಧ ಕಂಪೆನಿಯು ಉತ್ಪಾದಿಸಿ ರೋಗಿಗಳಿಗೆ ಪೂರೈಸಲಾಗುತ್ತಿದೆ. ರೆಮ್ಡೆಸಿವಿರ್ ಯುಎಸ್ ಔಷಧ ತಯಾರಕ ಗಿಲ್ಯಾಡ್ ಸೈನ್ಸಸ್ ತಯಾರಿಸಿದ ಔಷಧವಾಗಿದ್ದು, ಈ ಕಂಪನಿಯು ಐದು ಭಾರತೀಯ ಫಾರ್ಮಾ ಕಂಪನಿಗಳೊಂದಿಗೆ ಪರವಾನಗಿ ಒಪ್ಪಂದಗಳನ್ನು ಮಾಡಿಕೊಂಡಿದೆ. ಆ ಐದರಲ್ಲಿ ಹೆಟೆರೊ ಮತ್ತು ಸಿಪ್ಲಾ ತಮ್ಮ ಔಷಧದ ಸಾಮಾನ್ಯ ಆವೃತ್ತಿಗಳನ್ನು ಪ್ರಾರಂಭಿಸಲು ಭಾರತೀಯ ಔಷಧ ಮಹಾನಿಯಂತ್ರಕರ ಪರವಾನಗಿ ಅನುಮೋದನೆಯನ್ನು ಪಡೆದಿದ್ದಾರೆ.
ಹೆಟೆರೊ ಫಾರ್ಮಾ ತನ್ನ ಜೆನೆರಿಕ್ ರೆಮ್ಡೆಸಿವಿರ್ ಅನ್ನು ಕೋವಿಫೋರ್ ಎಂಬ ಬ್ರಾಂಡ್ ಹೆಸರಿನಲ್ಲಿ ಬಿಡುಗಡೆ ಮಾಡಿದೆ.
ಎರಡು ದಿನಗಳ ಮೊದಲು ಮುಂಬೈ ಮೂಲದ ಗ್ಲೆನ್ ಮಾರ್ಕ್ ಕಂಪನಿ ಕೊರೊನಾ ವೈರಸ್ ನಿಂದಾಗಿ ಲಘ ಮತ್ತು ಸಾಧಾರಣ ಸೋಂಕಿಗೆ ಒಳಗಾದ ರೋಗಿಗಳಿಗೆಂದೇ ಫೆಬಿಫ್ಲೂ ಎಂಬ ಮಾತ್ರೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇದೀಗ ಈ ನಿಟ್ಟಿನಲ್ಲಿ ಮತ್ತೊಂದು ದೇಶೀಯ ಕಂಪನಿ ಯಶಸ್ಸು ಸಾಧಿಸಿದಂತಾಗಿದೆ