ಬೆಂಗಳೂರು: “ಕೊರೊನಾ ಒಂದು ದೊಡ್ಡ ಪಿಡುಗು. ಮುಖ್ಯಮಂತ್ರಿಗಳು ಸರ್ವಪಕ್ಷದ ಸಭೆಯನ್ನು ಕರೆಯಬೇಕಿತ್ತು. ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ, ಕೊರೊನಾವನ್ನು ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಡಿ.ಕೆ.ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು “ಪ್ರಪಂಚಕ್ಕೆ ಮಹಾಮಾರಿ ಕಾಯಿಲೆ ಎದುರಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಲವು ಕ್ರಮಗಳನ್ನು ತೆಗೆದುಕೊಂಡಿವೆ. ಕೊರೊನಾ ವಿಚಾರವಾಗಿ ಸರ್ಕಾರ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳಿಗೆ ಕಾಂಗ್ರೆಸ್ ಸಹಕಾರ ನೀಡುತ್ತದೆ ಎಂದರು.
ಕೆಪಿಸಿಸಿ ಟಾಸ್ಕ್ ಫೋರ್ಸ್ ರಚನೆ
“ನಮ್ಮ ಪಕ್ಷದಲ್ಲೂ ಹಲವು ಕಾರ್ಯಕರ್ತರು ಮತ್ತು ಮುಖಂಡರು ವೈದ್ಯಕೀಯ ಶಿಕ್ಷಣವನ್ನು ಪಡೆದವರಿದ್ದಾರೆ. ಇವರಲ್ಲಿ ಕೆಲವರು ಆಯ್ಕೆಮಾಡಿ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದೇವೆ. ಮಾಜಿ ಆರೋಗ್ಯ ಸಚಿವ ರಮೇಶ್ ಕುಮಾರ್ ಇದರ ಅಧ್ಯಕ್ಷರಾಗಿರುತ್ತಾರೆ” ಎಂದು ಡಿಕೆಶಿ ತಿಳಿಸಿದ್ದಾರೆ.
ಕರ್ನಾಟಕ ಕಾಂಗ್ರೆಸ್ ರಿಲೀಫ್ ಫಂಡ್
ಸುದ್ದಿಗೋಷ್ಠಿಯಲ್ಲಿ ಮುಂದುವರಿದು ಮಾತನಾಡಿದ ಡಿಕೆಶಿ, “ಕರ್ನಾಟಕ ಕಾಂಗ್ರೆಸ್ ರಿಲೀಫ್ ಫಂಡ್ ಆರಂಭಿಸುತ್ತಿದೆ. ನಮ್ಮ ಪಕ್ಷದ ಎಲ್ಲಾ ಶಾಸಕರಿಗೆ ಒಂದು ಸೂಚನೆಯನ್ನು ನೀಡಲಾಗಿದೆ. ಕನಿಷ್ಠ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಲು ಸೂಚಿಸಿದ್ದೇವೆ. ಕಾರ್ಯಕರ್ತರೂ ಇದಕ್ಕೆ ದೇಣಿಗೆ ನೀಡಬಹುದು” ಎಂದು ಮಾಹಿತಿ ನೀಡಿದರು.
ಇದೇ ವೇಳೆ ಕೆಲ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ ಶಿವಕುಮಾರ್,
“ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ನಮ್ಮ ಸರಕಾರದ ಅವಧಿಯಲ್ಲಿ ಆರಂಭಿಸಿದಾಗ, ಇದೇ ಬಿಜೆಪಿಯವರು ಲೇವಡಿ ಮಾಡಿದ್ದರು. ಈಗ ಇದರ ಮಹತ್ವ ಏನು ಎನ್ನುವುದು ಇವರಿಗೆ ಅರ್ಥವಾಗಿದೆ” ಎಂದು ಕುಟುಕಿದ್ದಾರೆ.








