ಶುಬ್ಮನ್ ಗಿಲ್ ಅವರನ್ನು ಆಟವಾಡಲು ಬಿಡಿ.. ಯಾರ ಜೊತೆಗೂ ಹೋಲಿಕೆ ಬೇಡ
ಟೀಮ್ ಇಂಡಿಯಾದ ಯುವ ಪ್ರತಿಭೆ ಶುಬ್ಮನ್ ಗಿಲ್ ಅವರನ್ನು ಮಾಜಿ ಸ್ಟಾರ್ ಆಟಗಾರರ ಜೊತೆಗೂ ಹೋಲಿಕೆ ಮಾಡಬೇಡಿ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ವಾಸೀಮ್ ಜಾಫರ್ ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಶುಬ್ಮನ್ ಗಿಲ್ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು.
ಚೊಚ್ಚಲ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 45 ರನ್ ದಾಖಲಿಸಿದ್ರೆ, ಎರಡನೇ ಇನಿಂಗ್ಸ್ ನಲ್ಲಿ ಅಜೇಯ 35 ರನ್ ಗಳಿಸಿ ಗಮನ ಸೆಳೆದಿದ್ದರು.
ಶುಬ್ಮನ್ ಗಿಲ್ ಅವರ ಬ್ಯಾಟಿಂಗ್ ಶೈಲಿ ಮತ್ತು ಕೌಶಲ್ಯವನ್ನು ಗಮನಿಸಿದ ಕ್ರಿಕೆಟ್ ಪ್ರೇಮಿಗಳು ಮಾಜಿ ಆಟಗಾರರ ಜೊತೆ ಹೋಲಿಕೆ ಮಾಡುತ್ತಿದ್ದರು.
ಇದನ್ನು ಗಮನಿಸಿರುವ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ವಾಸೀಮ್ ಜಾಫರ್ ಕಿವಿ ಮಾತೊಂದನ್ನು ಹೇಳಿದ್ದಾರೆ.
ಶುಬ್ಮನ್ ಗಿಲ್ ವಿಶೇಷ ಪ್ರತಿಭೆಯುಳ್ಳ ಆಟಗಾರ. ಆತನನ್ನು ತನ್ನ ಪಾಡಿಗೆ ಆಟವಾಡಲು ಬಿಡೋಣ. ಆತನ ಕ್ರಿಕೆಟ್ ಜೀವನ ಉತ್ತುಂಗಕ್ಕೇರಲಿ. ಹೀಗಾಗಿ ಆತನನ್ನು ಯಾರ ಜೊತೆಗೂ ಹೋಲಿಕೆ ಮಾಡೋದು ಬೇಡ. ಆತನ ಮೇಲೆ ಒತ್ತಡ ಹೇರುವೂದು ಬೇಡ. ಆತ ಮುಂದೆ ಯಾರ ಉತ್ತರಾಧಿಕಾರಿಯೂ ಅಲ್ಲ. ಆತ ಮೊದಲು ಶುಬ್ಮನ್ ಗಿಲ್. ಇದೇ ರೀತಿ ಯುವ ಪ್ರತಿಭೆಗಳನ್ನು ಮಹಾನ್ ಕ್ರಿಕೆಟ್ ಆಟಗಾರರ ಜೊತೆ ಹೋಲಿಕೆ ಮಾಡಿ, ನಂತರ ಅವರು ಒತ್ತಡಕ್ಕೆ ಸಿಲುಕಿ ಅವರ ಪ್ರತಿಭೆ ಕಮರಿ ಹೋಗಿದೆ. ಯಾಕಂದ್ರೆ ಮಾಜಿ ಆಟಗಾರರ ಜೊತೆ ಹೋಲಿಕೆ ಮಾಡಿ ಅವರು ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡದೇ ಇದ್ದಾಗ ಅವರು ಒತ್ತಡಕ್ಕೆ ಸಿಲುಕಿದ್ದಾರೆ. ಶುಬ್ಮನ್ ಗಿಲ್ ಹಾಗೇ ಆಗೋದು ಬೇಡ ಎಂದು ವಾಸೀಮ್ ಜಾಫರ್ ಹೇಳಿದ್ದಾರೆ.
ಈಗಾಗಲೇ ಪೃಥ್ವಿ ಶಾ, ರಿಷಬ್ ಪಂತ್, ಮಯಾಂಕ್ ಅಗರ್ ವಾಲ್ ಸೇರಿದಂತೆ ಅನೇಕ ಯುವ ಕ್ರಿಕೆಟಿಗರನ್ನು ಮಾಜಿ ಆಟಗಾರರ ಜೊತೆ ಹೋಲಿಕೆ ಮಾಡಲಾಗಿತ್ತು. ಇದೀಗ ಈ ಎಲ್ಲಾ ಆಟಗಾರರು ಒತ್ತಡಕ್ಕೆ ಸಿಲುಕಿ ಆಡಡಬೇಕಾದಂತ ಪರಿಸ್ಥಿತಿ ಇದೆ.
ಒಟ್ಟಿನಲ್ಲಿ ಯುವ ಕ್ರಿಕೆಟಿಗರು ಸ್ಟಾರ್ ಆಟಗಾರರ ಜೊತೆಗೆ ಹೋಲಿಕೆ ಮಾಡುವಾಗ ಪ್ರಬುದ್ಧತೆಯನ್ನು ಪಡೆದುಕೊಳ್ಳಬೇಕು. ಆ ಹೋಲಿಕೆಗಳನ್ನು ಗಣನೆಗೆ ತೆಗೆದುಕೊಳ್ಳದೇ ತಮ್ಮ ಆಟವನ್ನು ಆಡಬೇಕಾಗಿದೆ. ಇಲ್ಲದೆ ಇದ್ರೆ ನಿರೀಕ್ಷೆಗಳು ಜಾಸ್ತಿಯಾದಾಗ ಅದಕ್ಕೆ ತಕ್ಕಂತೆ ಆಡದೇ ಇದ್ದಾಗ ಒತ್ತಡಕ್ಕೆ ಸಿಲುಕುತ್ತಾರೆ. ಅಷ್ಟೇ ಅಲ್ಲ, ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಯುವ ಕ್ರಿಕೆಟಿಗರು ಪ್ರತಿ ಪಂದ್ಯದಲ್ಲೂ ಕಲಿಯುವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಅದಕ್ಕಿಂತ ಹೆಚ್ಚಾಗಿ ಬದ್ಧತೆಯನ್ನೂ ಮೈಗೂಡಿಸಿಕೊಳ್ಳಬೇಕು.