ಮಹೀ ಭಾಯ್ಯವರನ್ನು ಅವಲಂಬಿಸಿಲ್ಲ… ನನಗೆ ನನ್ನ ಮೇಲೆ ನಂಬಿಕೆ ಇದೆ – ಕುಲದೀಪ್ ಉಡಾಫೆ…!
ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ 2019ರ ವಿಶ್ವಕಪ್ ನಂತರ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ಈ ಬಾರಿಯ ಐಪಿಎಲ್ನಲ್ಲಿ ಆಡಬೇಕು ಅಂತ ಕಠಿಣ ಅಭ್ಯಾಸ ನಡೆಸಿದ್ರು. ಆ ಮೂಲಕ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಬೇಕು ಎಂಬ ಆಸೆಯಲ್ಲಿದ್ದರು. ಆದ್ರೆ ಕೊರೋನಾ ವೈರಸ್ ಧೋನಿ ಆಸೆಗಳನ್ನು ಭಗ್ನಗೊಳಿಸಿದೆ. ಈ ಬಾರಿಯ ಟಿ-ಟ್ವೆಂಟಿ ವಿಶ್ವಕಪ್ ಮತ್ತು ಐಪಿಎಲ್ ಭವಿಷ್ಯ ಇನ್ನೂ ನಿರ್ಧಾರವಾಗಿಲ್ಲ. ಹೀಗಾಗಿ ಧೋನಿಯ ಕ್ರಿಕೆಟ್ ಭವಿಷ್ಯದ ಬಗ್ಗೆ ಹಲವಾರು ಪ್ರಶ್ನೆಗಳು ಎದುರಾಗಿವೆ.
ಆದ್ರೂ ಧೋನಿ ಟೀಮ್ ಇಂಡಿಯಾವನ್ನು ಮುನ್ನೆಡೆಸಿದ್ದ ರೀತಿಗೆ ಎಲ್ಲರೂ ಬೆರಗುಗೊಳುತ್ತಿದ್ದರು. ಪಂದ್ಯದ ಗತಿಯನ್ನು ಕ್ಷಣ ಮಾತ್ರದಲ್ಲಿ ಅರಿತುಕೊಳ್ಳುತ್ತಿದ್ದ ಧೋನಿ ತಂಡದ ಆಟಗಾರರಿಗೆ ಸ್ಫೂರ್ತಿ ನೀಡ್ತಾ ಇದ್ರು. ಅದರಲ್ಲೂ ಸ್ಪಿನ್ನರ್ಗಳಿಗೆ ಸಾಕಷ್ಟು ಸಲಹೆ -ಮಾರ್ಗದರ್ಶನಗಳನ್ನು ನೀಡುತ್ತಿದ್ದರು. ಇದೀಗ ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿಯ ಬಗ್ಗೆ ಕುಲ್ಚಾ ಗ್ಯಾಂಗ್ನ ಕುಲದೀಪ್ ಯಾದವ್ ಮಾತನಾಡಿದ್ದಾರೆ.
ಮಹೇಂದ್ರ ಸಿಂಗ್ ಧೋನಿ 2019ರ ವಿಶ್ವಕಪ್ ನಂತರ ಯಾವುದೇ ಅಂತಾರಾಷ್ಟ್ರೀಯ ಟೂರ್ನಿಗಳನ್ನು ಆಡಿಲ್ಲ. ಒಬ್ಬ ಆಟಗಾರನಾಗಿ ಧೋನಿಯವರ ಸಲಹೆ -ಮಾರ್ಗದರ್ಶನಗಳನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಹಾಗಂತ ನನ್ನ ಸಾಮಥ್ರ್ಯ ಏನು ಎಂಬುದನ್ನು ನಾನು ಯಾರಿಗೂ ಸಾಬೀತುಪಡಿಸುವ ಅಗತ್ಯವಿಲ್ಲ. ನಾನು ಈಗ ಅವರನ್ನು ಹೆಚ್ಚು ಅವಲಂಬಿತನಾಗುತ್ತೇನೆ ಎಂದು ಹೇಳುವಂಗಿಲ್ಲ. ಯಾಕಂದ್ರೆ ನನ್ನ ಸಾಮಥ್ರ್ಯದ ಮೇಲೆ ನನಗೆ ನಂಬಿಕೆ ಇದೆ. ಅದಕ್ಕೆ ಸರಿಯಾಗಿ ನಾನು ಅಭ್ಯಾಸ ಮಾಡುತ್ತಿದ್ದೇನೆ. ಅಷ್ಟಕ್ಕೂ ಇದೊಂದು ಟೀಮ್ ವರ್ಕ್ ಅಂತ ಧೋನಿಯ ಬಗ್ಗೆ ಕುಲದೀಪ್ ಯಾದವ್ ಸ್ವಲ್ಪ ಉಡಾಫೆಯಾಗಿಯೇ ಮಾತನಾಡಿದ್ದಾರೆ.
ನಿಜ. ಅದರಲ್ಲಿ ಎರಡು ಮಾತಿಲ್ಲ. ಮಹೀ ಭಾಯ್ ನನಗೆ ಯಾವಾಗಲೂ ಮಾರ್ಗದರ್ಶನ ನೀಡುತ್ತಿದ್ದರು. ಅದಕ್ಕೆ ಬಲವಾದ ಕಾರಣವೂ ಇತ್ತು. ವಿಕೆಟ್ ಕೀಪರ್ ಯಾವಾಗಲೂ ಬ್ಯಾಟ್ಸ್ ಮೆನ್ ಯಾವ ರೀತಿ ಆಡ್ತಾನೆ ಎಂಬುದನ್ನು ಬೇಗನೇ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಅದ್ರಲ್ಲೂ ಮಹೀ ಭಾಯ್ ನಂತಹ ಅನುಭವಿ ಆಟಗಾರರ ಬ್ಯಾಟ್ಸ್ ಮೆನ್ ಯಾವ ರೀತಿ ಆಡ್ತಾನೆ ಎಂಬುದನ್ನು ತಿಳಿದುಕೊಳ್ಳುತ್ತಿದ್ದರು. ಇದೆಲ್ಲಾ ಟೀಮ್ ವರ್ಕ್ ಅಂತ ಕುಲದೀಪ್ ಯಾದವ್ ಹೇಳಿದ್ದಾರೆ.
ಎಡಗೈ ಬೌಲರ್ ಆಗಿರುವ ಕುಲದೀಪ್ ಯಾದವ್ ಅವರು ಸ್ಥಿರ ಪ್ರದರ್ಶನ ನೀಡದ ಕಾರಣ ಈಗ ತಂಡದಿಂದ ಹೊರಗುಳಿದಿದ್ದಾರೆ. ಆದ್ರೆ ಕುಲದೀಪ್ ಯಾದವ್ ಮೂರು ಮಾದರಿಯ ಕ್ರಿಕೆಟ್ ನಲ್ಲೂ ಟೀಮ್ ಇಂಡಿಯಾದ ಎಕ್ಸ್ ಫ್ಯಾಕ್ಟರ್ ಬೌಲರ್. ಈಗಾಗಲೇ ಯಾದವ್ ಆರು ಟೆಸ್ಟ್ ಪಂದ್ಯಗಳಲ್ಲಿ 24 ವಿಕೆಟ್, 60 ಏಕದಿನ ಪಂದ್ಯಗಳಲ್ಲಿ 104 ವಿಕೆಟ್ ಹಾಗೂ 21 ಟಿ-ಟ್ವೆಂಟಿ ಪಂದ್ಯಗಳಲ್ಲಿ 39 ವಿಕೆಟ್ ಕಬಳಿಸಿದ್ದಾರೆ.
ಇನ್ನು ಕುಲದೀಪ್ ಯಾದವ್ ಧೋನಿಗೆ ಈ ರೀತಿ ಟಾಂಗ್ ಕೊಡುತ್ತಿರುವುದು ಇದೇನೂ ಹೊಸತಲ್ಲ. ಕೆಲವೊಂದು ಸಲ ಮೈದಾನದಲ್ಲೂ ಧೋನಿಯ ಮಾತುಗಳನ್ನು ಕೇಳುತ್ತಿರಲಿಲ್ಲ. ಹೀಗಾಗಿ ಧೋನಿ ಕೆಲವೊಂದು ಬಾರಿ ಕುಲದೀಪ್ ಯಾದವ್ಗೆ ಕ್ಲಾಸ್ ಕೂಡ ತೆಗೆದುಕೊಂಡಿದ್ದರು. ಈ ವಿಚಾರವನ್ನು ಸ್ವತಃ ಕುಲದೀಪ್ ಯಾದವ್ ಅವರೇ ಹೇಳಿಕೊಂಡಿದ್ದರು. ನಾನು ಹುಚ್ಚನಲ್ಲ. 300 ಏಕದಿನ ಪಂದ್ಯಗಳನ್ನು ಆಡಿದ್ದೇನೆ ಅಂತ ಧೋನಿ ಒಂದು ಬಾರಿ ಮೈದಾನದಲ್ಲೇ ಕುಲದೀಪ್ ಯಾದವ್ಗೆ ಹೇಳಿದ್ದರು.