ರಸ್ತೆಗಿಳಿದ ಜನರಿಗೆ ಲಾಠಿಯಲ್ಲಿ ಹೊಡೆಯಬೇಡಿ – ಪೊಲೀಸರಿಗೆ ಕೈಮುಗಿದು ಮನವಿ ಮಾಡಿಕೊಂಡ ಜಗ್ಗೇಶ್
ಬೆಂಗಳೂರು : ದೇಶದಲ್ಲಿ ಕೋವಿಡ್ 2ನೇ ಅಲೆ ಸೃಷ್ಟಿಸಿರುವ ಭೀಕರ ಪರಿಸ್ಥಿತಿಗೆ ಜನರು ಅದ್ರಲ್ಲು ಬಡವರು ತತ್ತರಿಸಿಹೋಗಿದ್ದಾರೆ. ಒಂದೆಡೆ ಆಕ್ಸಿಜನ್ ಕೊರೆತ, ಬೆಡ್ ಕೊರತೆ ಮತ್ತೊಂದೆಡೆ , ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ , ಚಿಕಿತ್ಸೆಗೆ ಹಣವಿಲ್ಲದೇ ಪರದಾಡುವ ಸ್ಥಿತಿ ಇದೆ.. ದಿನೇ ದಿನೇ , ಸೋಂಕಿತರ ಸಂಖ್ಯೆ , ಸಾವಿನ ಸಂಖ್ಯೆ ಹೆಚ್ಚಾಗ್ತಲೇ ಇದೆ..
ಈ ನಡುವೆ ಸ್ಯಾಂಡಲ್ ವುಡ್ , ಬಾಲಿವುಡ್ , ಟಾಲಿವುಡ್ , ಕಾಲಿವುಡ್ ನ ಅನೇಕ ಸಿನಿಮಾ ತಾರೆಯರು ಬಡವರಿಗೆ , ಕೋವಿಡ್ ಸೋಂಕಿತರಿಗೆ ತಮಗೆ ತೋಚಿದ ಸಹಾಯಗಳನ್ನ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್ , ಶ್ರೀಮುರುಳಿ, ರಾಗಿಣಿ, ಅಕ್ಷಯ್ ಕುಮಾರ್ , ಸಲ್ಮಾನ್ ಖಾನ್ , ಸೋನು ಸೂದ್ , ಹೀಗೆ ಹಲವರು ಕಷ್ಟದ ಸಂದರ್ಭದಲ್ಲಿ ಸಹಾಯಾಸ್ತ ಚಾಚಿದ್ದಾರೆ.
ಮತ್ತೊಂದೆಡೆ ಅನೇಕ ಸೆಲೆಬ್ರಿಟಿಗಳು ಜೀವ ಕಳೆದುಕೊಂಡಿದ್ದಾರೆ.. ಇನ್ನೂ ಹಲವರು ತಮ್ಮರನ್ನ ಕಳೆದುಕೊಂಡ ದೂಃಖದಲ್ಲಿದ್ದಾರೆ. ಇನ್ನೂ ಅನೇಕರು ಆಗಾಗ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿದ್ದಾರೆ.
ಈ ನಡುವೆ ಸ್ಯಾಂಡಲ್ ವುಡ್ ನ ಹಿರಿಯ ನಟ ಜಗ್ಗೇಶ್ ಸಹ ಕೊರೊನಾ ಸಂಕಷ್ಟದ ಸಮಯದಲ್ಲಿ ಸಾಕಷ್ಟು ಮಂದಿಗೆ ನೆರವಾಗಿದ್ದಾರೆ. ಆಕ್ಸಿಜನ್, ಬೆಡ್ ಸಿಗದೆ ಪರದಾಡುತ್ತಿರುವ ಜನರ ನೆರವಿಗೆ ಧಾವಿಸುತ್ತಿದ್ದಾರೆ.
ಮತ್ತೊಂದೆಡೆ ಪ್ರತಿದಿನ ಸಾಮಾಜಿಕ ಜಾಲತಾಣದ ಮೂಲಕ ಕೊರೊನಾ ಜಾಗೃತಿ ಮೂಡಿಸುತ್ತಿರುವ ನಟ ಜಗ್ಗೇಶ್ ಸದ್ಯ ಪೊಲೀಸ್ ಅಧಿಕಾರಿಗಳಲ್ಲಿ ಒಂದು ಮನವಿ ಮಾಡಿಕೊಂಡಿದ್ದಾರೆ. ಲಾಕ್ ಡೌನ್ ಆಗುತ್ತಿದ್ದಂತೆ ರಸ್ತೆಗಿಳಿಯುವ ಸಾರ್ವಜನಿಕರಿಗೆ ಹೊಡೆಯಬೇಡಿ ಎಂದು ವಿನಂತಿ ಮಾಡಿದ್ದಾರೆ.
ಯುವಕರಾದರೆ ಪರವಾಗಿಲ್ಲ ತಡೆದುಕೊಳ್ಳುತ್ತಾರೆ. ಆದರೆ ಸಾಕಷ್ಟು ಮಂದಿ ವಯಸ್ಸಾದವರು, ಕಾಯಿಲೆಯಿಂದ ಬಳಲುವವರು ಇರುತ್ತಾರೆ ಅಂತವರಿಗೆ ತಡೆದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ದಯವಿಟ್ಟು ಹೊಡೆಯಬೇಡಿ ಎಂದು ಕೈ ಮುಗಿದು ಕೇಳಿಕೊಂಡಿದ್ದಾರೆ. ಈ ಬಗ್ಗೆ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
‘ರಾಜ್ಯದ ಆರಕ್ಷಕ ಇಲಾಖೆಯ ಮುಖ್ಯಸ್ಥರಿಗೆ ವಿನಂತಿ. ಸರ್ಕಾರ ಹಾಗು ತಮ್ಮ ಆದೇಶ ಪಾಲಿಸದವರಿಗೆ ದಂಡ ಹಾಕಿ ವಾಹನ ಜಪ್ತಿಮಾಡಿ ತೊಂದರೆ ಇಲ್ಲಾ. ಆದರೆ ನಿರ್ದಯವಾಗಿ ಲಾಠಿಯಲ್ಲಿ ಹೊಡೆಯಬೇಡಿ. ಯುವಕರಾದರೆ ಪರವಾಗಿಲ್ಲಾ ತಡೆಯುತ್ತಾರೆ. ಆದರೆ ವಯಸ್ಸಾದವರು ಪಾಪ ಯಾವ ಕಾಯಿಲೆ ಇರುತ್ತದೆ ನಿಮಗೇನು ತಿಳಿದಿರುತ್ತದೆ. ಕೆಲ ಅಧಿಕಾರಿಗಳು ಒಂದು ಏಟುಕೊಟ್ಟು ಭಯಪಡಿಸುವ ಬದಲು ಪ್ರಾಣ ಹೋಗುವಂತೆ ಬಾರಿಸುತ್ತಾರೆ’
‘ಈ ಹಾಳಾದ ಕೊರೊನಾ ಮನುಕುಲದ ಅನ್ನ ದುಡಿಮೆ ನೆಮ್ಮದಿಯ ಕಸಿದಿದೆ. ಮನುಷ್ಯರಾಗಿ ನಾವು ಮನುಷ್ಯತ್ವ ಪಾಲಿಸುವ. ಜನತೆಯಲ್ಲು ಮನವಿ ಈ ರೋಗ ಮನುಕುಲದ ಸಾವಿಗಾಗಿಯೇ ಬಂದಿದೆ. ದರೆಯೇ ಹತ್ತಿ ಉರಿಯುತ್ತಿದೆ ದಯಮಾಡಿ ಸ್ವಲ್ಪದಿನ ವೈದ್ಯಲೋಕದ ಮಾತಿನಂತೆ ಕೆಲತಿಂಗಳು ಎಚ್ಚರವಾಗಿ ಇದ್ದುಬಿಡಿ ದುಯವಿಟ್ಟು’ ಎಂದು ಬರೆದುಕೊಂಡಿದ್ದಾರೆ.