ಚಿಕ್ಕಮಗಳೂರು : ರಾಜ್ಯ ಸರ್ಕಾರವು ಕಳ್ಳತನದ್ದು, ಹೀಗಾಗಿ ಮತದಾರರು ಈ ಬಾರಿ ಬಿಜೆಪಿ (BJP)ಯನ್ನು ದೂರ ಇಡಬೇಕು ಎಂದು ಎಐಸಿಸಿ ನಾಯಕ ರಾಹುಲ್ ಗಾಂಧಿ ಮತದಾರರಲ್ಲಿ ಮನವಿ ಮಾಡಿದ್ದಾರೆ.
ನಗರದಲ್ಲಿ ನಡೆದ ರೋಡ್ ಶೋ ವೇಳೆ ಮಾತನಾಡಿದ ಅವರು, ಬಿಜೆಪಿಗೆ 40 ಅಂದರೆ ತುಂಬಾ ಪ್ರೀತಿ. ಹೀಗಾಗಿ ಮತದಾರರು ಬಿಜೆಪಿಗೆ 40 ಸ್ಥಾನ ಕೊಟ್ಟು, ನಮಗೆ 150 ಸ್ಥಾನ ಕೊಡಿ ಎಎಂದು ಮನವಿ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಹೋದಲ್ಲೆಲ್ಲ ತಮ್ಮ ಬಗ್ಗೆಯೇ ಹೇಳುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರದ ಒಂದು ಸಾಧನೆಯನ್ನೂ ಹೇಳುತ್ತಿಲ್ಲ. ಇದು ಜನರ ಆಶೀರ್ವಾದದಿಂದ ಸೃಷ್ಟಿಯಾದ ಸರ್ಕಾರವಲ್ಲ.. ಭ್ರಷ್ಟಾಚಾರದಿಂದ ಮಾಡಿದ ಹಣದಿಂದ ಸರ್ಕಾರ ರಚನೆಯಾಗಿದೆ. ಈ ಬಾರಿಯೂ ಬಿಜೆಪಿಯವರು ಮತ್ತದೇ ಕಳ್ಳತನ ಸರ್ಕಾರ ಮಾಡಲು ಪ್ರಯತ್ನ ಮಾಡುತ್ತಾರೆ. ಹೀಗಾಗಿ ಈ ಬಾರಿ ಅವರನ್ನು ದೂರ ಇಡಬೇಕು ಎಂದು ಮನವಿ ಮಾಡಿದರು.
ಪ್ರಧಾನಿ ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜ್ಯಕ್ಕೆ ಭೇಟಿ ನೀಡುತ್ತಾರೆ. ಮೋದಿಯವರು ಕಂಟ್ರಾಕ್ಟರ್ ಸಂಘದ ಅಧ್ಯಕ್ಷ ಕೆಂಪಣ್ಣನವರ ಪತ್ರಕ್ಕೆ ಉತ್ತರ ಕೊಡಲಿಲ್ಲ ಎಂದು ಲೇವಡಿ ಮಾಡಿದ್ದಾರೆ. ಭಾಷಣದ ವೇಳೆಯೂ ನಾವು ನಮ್ಮ ನಾಯಕರ ಎಲ್ಲರ ಹೆಸರು ಹೇಳುತ್ತೇವೆ. ಆದರೆ ಮೋದಿಯವರು ಯಾರ ಹೆಸರನ್ನೂ ಹೇಳಲ್ಲ. ಬೊಮ್ಮಾಯಿ, ಬಿ.ಎಸ್.ವೈ ಸೇರಿದಂತೆ ಯಾರ ಹೆಸರನ್ನೂ ಹೇಳಲ್ಲ ಎಂದು ಲೇವಡಿ ಮಾಡಿದರು.
1978ರಲ್ಲಿ ನನ್ನ ಅಜ್ಜಿ ಇಲ್ಲಿ ಸ್ಪರ್ಧೆ ಮಾಡಿದ್ದರು. ನನಗೆ ಚಿಕ್ಕಮಗಳೂರಿಗೆ ಬರಲು ಹೆಮ್ಮೆಯಾಗುತ್ತದೆ. ನನ್ನ ಅಜ್ಜಿ ಚಿಕ್ಕಮಗಳೂರು ತುಂಬಾ ಚೆನ್ನಾಗಿದೆ ಎಂದು ಹೇಳಿದ್ದರು. ಇಲ್ಲಿನ ಜನ ತುಂಬಾ ಸುಂದರ ಹಾಗೂ ಒಳ್ಳೆಯವರು ಎಂದು ಗೊತ್ತಾಯ್ತು ಎಂದು ಹೊಗಳಿದರು.