ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವನಿತಾ (India Women vs South Africa Women) ತಂಡದ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಭಾರತೀಯ ಆಟಗಾರರು ಭರ್ಜರಿ ಪ್ರದರ್ಶನ ತೋರಿದ್ದಾರೆ.
ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕಿ ಹರ್ಮನ್ಪ್ರೀತ್ ಕೌರ್ (Harmanpreet Kaur) ಹಾಗೂ ಸ್ಮೃತಿ ಮಂಧಾನ ಭರ್ಜರಿ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಈ ಪಂದ್ಯದಲ್ಲಿ ಕೌರ್ ವೃತ್ತಿ ಜೀವನದ 6ನೇ ಶತಕ ಸಿಡಿಸಿದ ಸಾಧನೆ ಮಾಡಿದರೆ, ಮಂಧಾನ 7ನೇ ಶತಕ ಸಿಡಿಸಿದ್ದಾರೆ. ಅಷ್ಟೇ ಅಲ್ಲ, 7ನೇ ಶತಕ ಸಿಡಿಸಿದ ಮಂಧಾನ ಅತೀ ಹೆಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದ್ದಾರೆ. ಮಿಥಾಲಿ ರಾಜ್ ಅವರೊಂದಿಗೆ ಜಂಟಿ ಮೊದಲ ಸ್ಥಾನದಲ್ಲಿದ್ದಾರೆ.
ಹರ್ಮನ್ಪ್ರೀತ್ ಕೌರ್ 88 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 103 ರನ್ ಗಳಿಸಿ ಮಿಂಚಿದರು. ಈ ಮೂಲಕ ಏಕದಿನದಲ್ಲಿ 3500 ರನ್ ಪೂರೈಸಿದ ದಾಖಲೆ ನಿರ್ಮಿಸಿದರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಾಯಕಿ ಹರ್ಮನ್ಪ್ರೀತ್ ಕೌರ್ ಹಾಗೂ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ (Smriti Mandhana) ಅವರ ಶತಕದ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ದಾಖಲೆಯ 325 ರನ್ ಗಳಿಸಿತು.
24ನೇ ಓವರ್ ಗೆ ಬಂದ ಹರ್ಮನ್ಪ್ರೀತ್ ಕೇವಲ 87 ಎಸೆತಗಳಲ್ಲಿ ಶತಕ ಗಳಿಸುವಲ್ಲಿ ಯಶಸ್ವಿಯಾದರು. ಹರ್ಮನ್‌ಪ್ರೀತ್ ಕೌರ್, ಮಂಧಾನ ಜತೆಗೂಡಿ ಕೇವಲ 46 ಎಸೆತಗಳಲ್ಲಿ 50 ರನ್ ಸೇರಿಸಿದರು. ನಂತರ ಇಬ್ಬರೂ 90 ಎಸೆತಗಳಲ್ಲಿ ಶತಕದ ಜೊತೆಯಾಟ ಪೂರೈಸಿದರು. ಸ್ಮೃತಿ 120 ಎಸೆತಗಳಲ್ಲಿ 18 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 136 ರನ್ ಗಳಿಸಿದರು. ಅಂತಿಮವಾಗಿ ಈ ಇಬ್ಬರೂ ಆಟಗಾರರು 136 ಎಸೆತಗಳಲ್ಲಿ 171 ರನ್ ಗಳ ಜೊತೆಯಾಟ ನೀಡಿದರು.