ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಮಾತೃ ಹೃದಯ ಇರಬೇಕು : ಸಚಿವ ಡಾ.ಕೆ.ಸುಧಾಕರ್
ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಇಲ್ಲ, ಆರೂವರೆ ಕೋಟಿ ಜನರಿಗೂ ಸರ್ಕಾರದ ಯೋಜನೆಗಳ ಅರಿವು ಮೂಡಿಸಲು ಯತ್ನ
ದೊಡ್ಡಬಳ್ಳಾಪುರ : ಕಂದಾಯ ಇಲಾಖೆ ಎಲ್ಲಾ ಇಲಾಖೆಗಳಿಗೂ ಮಾತೃ ಇಲಾಖೆ. ಇದು ತಾಯಿ ಇದ್ದ ಹಾಗೆ. ಇಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಅಧಿಕಾರಿಯೂ ಮಾತೃ ಹೃದಯ ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕಿವಿಮಾತು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯ ಕನಸವಾಡಿ ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ- ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾಯಿತ ಪ್ರತಿನಿಧಿಯ ಗೆಲುವಿನ ದಿನದಿಂದಲೇ ಆತನ ಕೆಲಸ ಆರಂಭವಾಗುತ್ತದೆ. 5 ವರ್ಷವೂ ಆತ ಜನರಿಗಾಗಿ ಕೆಲಸ ಮಾಡಬೇಕು. ಸರ್ಕಾರದ ಯೋಜನೆ ಮತ್ತು ಸೌಲಭ್ಯಗಳನ್ನು ತಲುಪಿಸಬೇಕು ಎಂದು ತಿಳಿಸಿದರು.
ಸರ್ಕಾರ ಯೋಜನೆ, ಸೌಲಭ್ಯಗಳನ್ನು ಘೋಷಣೆ ಮಾಡುತ್ತದೆ. ಆದರೆ ಅಧಿಕಾರಿಗಳು ಅದನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಬೇಕು. ಕಂದಾಯ ಇಲಾಖೆಯಂತಹ ದೊಡ್ಡ ಇಲಾಖೆಯಲ್ಲಿ ಕೆಲಸ ಹೇಗೆ ನಡೆಯುತ್ತಿದೆ ಅನ್ನುವುದು ಜನರಿಗೆ ಗೊತ್ತಿದೆ. ಸಣ್ಣದೊಂದು ಕೆಲಸ ಆಗಬೇಕು ಅಂದರೂ ಚಪ್ಪಲಿ ಸವೆಸುವ ಕಾಲವಿತ್ತು. ಈಗಿನ ಸರ್ಕಾರ ಇದೆಲ್ಲವನ್ನೂ ಮನಗಂಡು, ಜನರ ಮನೆ ಬಾಗಿಲಿಗೆ ಸೌಲಭ್ಯಗಳನ್ನು ತಲುಪಿಸುವ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇಲ್ಲಿ 2071 ಫಲಾನುಭವಿಗಳಿಗೆ ಆದೇಶ ಪತ್ರ ನೀಡಲಾಗುತ್ತಿದೆ. ಕರ್ನಾಟಕ ಸರ್ಕಾರದ ಈ ಸೇವೆ ರಾಜ್ಯದ ಎಲ್ಲಾ ಕಡೆಯೂ ಸಿಗಲಿದೆ ಎಂದರು. Dr K Sudakar There is no politics in terms of development