ರಾಜಸ್ಥಾನದ ಅಜ್ಮೀರ್ ನಲ್ಲಿ ಹೈಪರ್ಆಕ್ಟಿವಿಟಿ ಡಿಸಾರ್ಡರ್ (ಎಡಿಎಚ್ಡಿ) ಮತ್ತು ಒಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್ (ಒಸಿಡಿ) ಯಿಂದ ಬಳಲುತ್ತಿದ್ದ ವ್ಯಕ್ತಿಗೆ ರೈಲ್ವೆ ಅಧಿಕಾರಿಗಳು ಅಹಮದಾಬಾದ್ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಪಾರ್ಸೆಲ್ ರೈಲಿನಲ್ಲಿ ಔಷಧ ತರಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಕೊರೋನಾ ಸೋಂಕಿನಿಂದಾಗಿ ಎಲ್ಲೆಡೆಯೂ ಲಾಕ್ ಡೌನ್ ಜಾರಿಯಲ್ಲಿರುವ ಈ ಸವಾಲಿನ ಸಮಯದಲ್ಲಿ ಸಮಾಜ ನಿರೀಕ್ಷೆಗೂ ಮೀರಿ ಸ್ಪಂದಿಸುತ್ತಿದೆ. ಅಂತಹ ಒಂದು ಘಟನೆ ರಾಜಸ್ಥಾನದ ಅಜ್ಮೀರ್ ನಲ್ಲಿ ನಡೆದಿದೆ.
ಏಪ್ರಿಲ್ 15 ರಂದು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(ಯುಪಿಎಸ್ಸಿ)ಯ ಆಕಾಂಕ್ಷಿ ಅಹಮದಾಬಾದ್ ನ ಹಿತೇಶ್ ಶರ್ಮಾ (23) ಅವರಿಗೆ ರಾಜಸ್ಥಾನದ ಅಜ್ಮೀರ್ ನಿಂದ ಅವರ ಚಿಕ್ಕಪ್ಪ ಕರೆ ಮಾಡಿ ತಾವು ಎದುರಿಸುತ್ತಿರುವ ತೊಂದರೆ ಬಗ್ಗೆ ಹೇಳುತ್ತಾರೆ. ಶರ್ಮಾ ಅವರ ಸೋದರ ಸಂಬಂಧಿ ಹೈಪರ್ಆಕ್ಟಿವಿಟಿ ಡಿಸಾರ್ಡರ್ (ಎಡಿಎಚ್ಡಿ) ಮತ್ತು ಒಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್ (ಒಸಿಡಿ) ಯಿಂದ ಬಳಲುತ್ತಿದ್ದು, ಅವರ ಔಷಧಿಯ ಸಂಗ್ರಹವು ಏಪ್ರಿಲ್ 14ಕ್ಕೆ ಮುಗಿದಿರುತ್ತದೆ.
ಹಿತೇಶ್ ಶರ್ಮಾ ಅವರ ಸೋದರಸಂಬಂಧಿಗೆ ಕ್ವೆಟ್ಯಾಪೈನ್ ಫ್ಯೂಮರೇಟ್ 200 ಮಿಗ್ರಾಂ ಮತ್ತು ಆಕ್ಸ್ಕಾರ್ಬಜೆಪೈನ್ (ಲೊವಾಕ್ಸ್) 300 ಮಿಗ್ರಾಂ ಮಾತ್ರೆಗಳು ಪ್ರತಿದಿನ ಬೇಕಾಗಿದ್ದು, ಅವುಗಳು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಲಭ್ಯವಿಲ್ಲ. ಪ್ರತಿ ತಿಂಗಳು ಶರ್ಮಾ ಅವರ
ಚಿಕ್ಕಪ್ಪ ಶರ್ಮಾರ ಸೋದರ ಸಂಬಂಧಿ ಜೊತೆ ವೈದ್ಯರ ಭೇಟಿಗಾಗಿ ಅಜ್ಮೀರ್ನಿಂದ ಅಹಮದಾಬಾದ್ಗೆ ಪ್ರಯಾಣಿಸುತ್ತಾರೆ.
ಈ ಮೊದಲು ಲಾಕ್ ಡೌನ್ ಏಪ್ರಿಲ್ 14 ಕ್ಕೆ
ಕೊನೆಗೊಳ್ಳುತ್ತದೆ ಎಂದು ಭಾವಿಸಿದ್ದ ಅವರು ಅಲ್ಲಿಯವರೆಗಿನ ಔಷಧಿ ಸಂಗ್ರಹವನ್ನು ಮಾಡಿದ್ದರು. ಆದರೆ ಲಾಕ್ ಡೌನ್ ವಿಸ್ತರಣೆಗೊಂಡ ಕಾರಣ ಸಂಗ್ರಹಿಸಿಟ್ಟ ಔಷಧ ಮುಗಿದು ಪುನಃ ಖಾಯಿಲೆ ಮರುಕಳಿಸುವ ಭೀತಿ ಉಂಟಾಯಿತು.
ಆಗ ಹಿತೇಶ್ ಶರ್ಮಾ ಅವರಿಗೆ ಕೆಲವು ದಿನಗಳ ಹಿಂದೆ ತಾನು ಓದಿದ್ದ ಆಟಿಸಂನಿಂದ ಬಳಲುತ್ತಿದ್ದ ಮಗುವಿಗೆ ಒಂಟೆಯ ಹಾಲಿನ ಅವಶ್ಯಕತೆ ಇದೆ ಎಂಬ ತಾಯಿಯ ಕೋರಿಕೆಗೆ ಸ್ಪಂದಿಸಿದ ಭಾರತೀಯ ರೈಲ್ವೆ ಅಧಿಕಾರಿಗಳ ಬಗ್ಗೆಗಿನ ಲೇಖನವೊಂದು ನೆನಪಾಗುತ್ತದೆ. ಕೂಡಲೇ ಆ ಲೇಖನವನ್ನು ತೆರೆದ ಶರ್ಮಾ ಅದರಲ್ಲಿದ್ದ http://www.parcel.indianrail.gov.in ವೆಬ್ ಲಿಂಕ್ ಅನ್ನು ಕಂಡುಹಿಡಿದರು. ಆ ವೆಬ್ ಲಿಂಕ್ ಬಳಸಿ, ಶರ್ಮಾ ಪಶ್ಚಿಮ ರೈಲ್ವೆಯ ಅಹಮದಾಬಾದ್ ವಿಭಾಗದ ರೈಲ್ವೆ ಅಧಿಕಾರಿಗಳನ್ನು ಸಂಪರ್ಕಿಸಿದರು. ರೈಲ್ವೆ ಅಧಿಕಾರಿಗಳು ಹೇಗಾದರೂ ಮಾಡಿ ಔಷಧಿಯನ್ನು ತಲುಪಿಸುವ ಭರವಸೆಯನ್ನು ನೀಡಿದರು. ನಂತರ ವೈದ್ಯರ ಪ್ರಿಸ್ಕ್ರಿಪ್ಷನ್ ಬಳಸಿ ಕನಿಷ್ಠ ಒಂದು ತಿಂಗಳಿಗೆ ಬೇಕಾದ ಔಷಧಿಗಳನ್ನು ಖರೀದಿಸಿದ ಶರ್ಮಾ ಏಪ್ರಿಲ್ 15 ರ ಸಂಜೆ ಅಹಮದಾಬಾದ್ನ ರೈಲ್ವೆ ಕಚೇರಿಗೆ ಅವುಗಳನ್ನು ತಲುಪಿಸಿದರು.
ಮರುದಿನ ಅಂದರೆ ಏಪ್ರಿಲ್ 16 ರ ಬೆಳಿಗ್ಗೆ 10 ರ ಸುಮಾರಿಗೆ ಚಿಕ್ಕಪ್ಪ ಕರೆ ಮಾಡಿ ಅಜ್ಮೀರ್ ರೈಲ್ವೆ ನಿಲ್ದಾಣಕ್ಕೆ ಔಷಧಿ ತಲುಪಿರುವುದಾಗಿಯೂ, ಅವುಗಳನ್ನು ಪಡೆಯಲು ತಾನು ಹೋಗುತ್ತಿರುವುದಾಗಿಯೂ ತಿಳಿಸಿದರು ಎಂದಿರುವ ಶರ್ಮಾ ಆಡಳಿತವು ಇಷ್ಟೊಂದು ನಾಗರಿಕ ಸ್ನೇಹಿಯಾಗಿರಬಹುದು ಎಂದು ನಾನು ಎಂದಿಗೂ ಯೋಚಿಸಲಿಲ್ಲ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
ಅಜ್ಮೀರ್ ರೈಲ್ವೆ ನಿಲ್ದಾಣಕ್ಕೆ ಕೊನೆಯ ನಿಮಿಷದ ಕೊರಿಯರ್ ತಲುಪಿಸಲು ಅಹಮದಾಬಾದ್ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಪಾರ್ಸೆಲ್ ರೈಲನ್ನು ಬಳಸಿದ್ದೇವೆ ಎಂದು ಪಶ್ಚಿಮ ರೈಲ್ವೆಯ ಅಹಮದಾಬಾದ್ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ.
ಲಾಕ್ ಡೌನ್ ಸಮಯದಲ್ಲಿ ಸಹ, ಅಗತ್ಯ ಮತ್ತು ಇತರ ಸರಕುಗಳನ್ನು ಸಾಗಿಸುವ ಭಾರತೀಯ ರೈಲ್ವೆಯ ಪಾರ್ಸೆಲ್ ರೈಲುಗಳ ಸೇವೆಗಳು ನಿಲ್ಲುವುದಿಲ್ಲ. ವಿದ್ಯಾರ್ಥಿ ಹಿತೇಶ್ ಶರ್ಮಾ ನಮ್ಮನ್ನು ಸಂಪರ್ಕಿಸಿ ಔಷಧಿಯ ಅವಶ್ಯಕತೆ ಅತ್ಯಗತ್ಯವಾಗಿದ್ದು, ತುರ್ತಾಗಿ ಹಸ್ತಾಂತರಿಸುವಂತೆ ಕೇಳಿಕೊಂಡರು.
ಅಜ್ಮೀರ್ ಮಾರ್ಗದ ಕಡೆಗೆ ಯಾವುದಾದರೂ ಪಾರ್ಸೆಲ್ ರೈಲು ಇದೆಯೇ ಎಂದು ನಾವು ಪರಿಶೀಲಿಸಿ, ಗುರುವಾರ ಬೆಳಿಗ್ಗೆ ನಿಗದಿಯಾಗಿದ್ದ ಅಹಮದಾಬಾದ್-ದೆಹಲಿ ಮಾರ್ಗದ ಪಾರ್ಸೆಲ್ ರೈಲಿನಲ್ಲಿ ಔಷಧಿಯನ್ನು ತಲುಪಿಸಿದ್ದೇವೆ ಎಂದು ಪಶ್ಚಿಮ ರೈಲ್ವೆಯ ಅಹಮದಾಬಾದ್ ವಿಭಾಗದ ಸಹಾಯಕ ವಾಣಿಜ್ಯ ವ್ಯವಸ್ಥಾಪಕ ಆಶಿಶ್ ಉಜ್ಲಯನ್ ಹೇಳಿದ್ದಾರೆ.
ಟ್ವಿಟರ್ ಅಥವಾ ಇತರ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ನಮಗೆ ವಿನಂತಿಗಳನ್ನು ಕಳುಹಿಸುವ ಜನರ ಟ್ರ್ಯಾಕ್ ಅನ್ನು ನಾವು ಗಮನಿಸುತ್ತೇವೆ. ಪ್ರತಿ ವಿನಂತಿಯನ್ನು ಅನುಸರಿಸಲು ಸಾಧ್ಯವಾಗದಿದ್ದರೂ, ನಾವು ತುರ್ತು ಅಗತ್ಯಗಳ ವಿನಂತಿ ಮತ್ತು ಬಿಕ್ಕಟ್ಟಿನ ಸಮಯದಲ್ಲಿ ನಾಗರಿಕರಿಗೆ ನಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡಲು ಪ್ರಯತ್ನಿಸುತ್ತೇವೆ ಎಂದು ಪಶ್ಚಿಮ ರೈಲ್ವೆಯ ಅಹಮದಾಬಾದ್ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ದೀಪಕ್ ಝಾ ಹೇಳಿದ್ದಾರೆ.








