ಬೆಂಗಳೂರು : ಕೊರೊನಾ ಹೆಸರಲ್ಲಿ ರಾಜ್ಯ ಸರ್ಕಾರ 2000 ಕೋಟಿ ರೂ. ಲೂಟಿ ಹೊಡೆದಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ವೈದ್ಯಕೀಯ ಸಚಿವ ಡಾ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯರ ಆರೋಪದಿಂದ ನನಗೆ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಾ.ಸುಧಾಕರ್, ಕೋವಿಡ್ ಪರಿಕರ ಖರೀದಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ತುರ್ತು ಸಂದರ್ಭ ಇದ್ದ ಕಾರಣ ಬೆಲೆ ನೋಡಿಕೊಂಡು ಕೂರಲು ಆಗಿಲ್ಲ. ಪಿಪಿಇ ಕಿಟ್ ಅಭಾವ ಇದ್ದ ಸಮಯ ಅದು. ಹೀಗಾಗಿ ದುಬಾರಿ ಮೊತ್ತಕ್ಕೆ ಖರೀದಿ ಆಗಿದೆ. ಖರ್ಚು ಮಾಡಿದ ಹಣಕ್ಕೆ ಲೆಕ್ಕ ನೀಡುತ್ತೇವೆ. ಎಲ್ಲಿಯೂ ಲೆಕ್ಕ ನೀಡದೆ ಇರಲು ಸಾಧ್ಯವಿಲ್ಲ. ಪಾರದರ್ಶಕತೆಯಿಂದ ಖರೀದಿ ಮಾಡಲಾಗಿದೆ. ಸಮಸ್ಯೆಗಳ ಮಧ್ಯೆ ನಾವು ಎಲ್ಲವನ್ನೂ ಎದುರಿಸುತ್ತಿದ್ದೇವೆ. ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಸಮರ್ಥನೆ ಮಾಡಿಕೊಂಡರು.
ಇದೇ ವೇಳೆ ಸಚಿವರ ಮಧ್ಯೆ ಸಮನ್ವಯ ಇಲ್ಲ ಎಂಬ ವಿಪಕ್ಷಗಳ ಹೇಳಿಕೆಗೆ ಉತ್ತರಿಸಿದ ಸುಧಾಕರ್, ಕೊರೊನಾ ನಿಯಂತ್ರಣ ಉಸ್ತುವಾರಿ ಸಚಿವರ ಮಧ್ಯೆ ಸಮನ್ವಯತೆ ಕೊರತೆ ಇಲ್ಲ. ನಾವು ಬಾಕ್ಸಿಂಗ್ ಮಾಡಿಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಎಲ್ಲರಿಗೂ ಅವರದ್ದೇ ಆದ ಜವಾಬ್ದಾರಿ ಇದೆ. ಸುರೇಶ್ ಕುಮಾರ್, ಅಶೋಕ್, ಬೊಮ್ಮಾಯಿ, ಶ್ರೀರಾಮುಲು ಎಲ್ಲರೂ ಒಟ್ಟಾಗಿ ಕೆಲಸ ಮಾಡ್ತಿದ್ದೇವೆ. ಯಡಿಯೂರಪ್ಪ ಅವರು ನಮ್ಮ ಕ್ಯಾಪ್ಟನ್. ಅವರ ನೇತೃತ್ವದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.