ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ 500 ವಿಕೆಟ್ ಪಡೆದ ಡ್ವಾನ್ ಬ್ರೇವೋ
ಡ್ವಾನ್ ಬ್ರೇವೋ… ವೆಸ್ಟ್ ಇಂಡೀಸ್ ನ ಕ್ರಿಕೆಟ್ ನ ಸಕಲಕಲಾವಲ್ಲಭ. ಆಟಕ್ಕೂ ಸೈ, ಡಾನ್ಸ್, ಹಾಡಿಗೂ ಜೈ ಅನ್ನೋದು ಇವರ ಜಾಯಮಾನ. ಲೈಫ್ ಅನ್ನು ಯಾವ ರೀತಿ ಎಂಜಾಯ್ ಮಾಡಿಕೊಂಡು ಯಶ ಸಾಧಿಸಬಹುದು ಅನ್ನೋದಕ್ಕೆ ಮತ್ತೊಂದು ನಿದರ್ಶನ ಡ್ವಾನ್ ಬ್ರೇವೋ.
ಹೌದು, ಡ್ವಾನೋ ಬ್ರೇವೋ ಅವರು ಈಗ ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ ಹೊಸ ಅಧ್ಯಾಯವನ್ನು ಬರೆದಿದ್ದಾರೆ. ಇದು ಸದ್ಯದ ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ ಹೊಸ ದಾಖಲೆಯೂ ಹೌದು. ಟಿ-20 ಕ್ರಿಕೆಟ್ ನಲ್ಲಿ 500 ವಿಕೆಟ್ ಪಡೆದ ಮೊದಲ ಕ್ರಿಕೆಟಿಗ ಎಂಬ ಗೌರವಕ್ಕೆ ಡ್ವಾನ್ ಬ್ರೇವೋ ಪಾತ್ರರಾಗಿದ್ದಾರೆ.
ಇದೀಗ ನಡೆಯುತ್ತಿರುವ 2020ರ ಕೆರೆಬಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಈ ಸಾಧನೆಯನ್ನು ಬ್ರೇವೋ ಮಾಡಿದ್ದಾರೆ. ಸಿಪಿಎಲ್ ನಲ್ಲಿ ಟ್ರಿಂಬಾಗೋ ನೈಟ್ ರೈಡರ್ಸ್ ತಂಡದ ಪರ ಆಡುತ್ತಿರುವ ಬ್ರೇವೋ, ಸೇಂಟ್ ಲೂಸಿಯಾ ಝೌನ್ಸ್ ತಂಡದ ರಖೀಮ್ ಕಾರ್ನ್ವಾಲ್ ಅವರ ವಿಕೆಟ್ ಪಡೆಯುವ ಮೂಲಕ ಈ ಸಾಧನೆಯನ್ನು ಮಾಡಿದ್ದಾರೆ.
ಬ್ರೇವೋ 459 ಪಂದ್ಯಗಳಲ್ಲಿ 500 ವಿಕೆಟ್ ಪಡೆದುಕೊಂಡಿದ್ದಾರೆ. ಆಲ್ ರೌಂಡರ್ ಆಗಿರುವ ಬ್ರೇವೋ ಬ್ಯಾಟಿಂಗ್ ನಲ್ಲೂ ಮಿಂಚು ಹರಿಸಿದ್ದಾರೆ. ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ ಬ್ರೇವೋ ಅವರು, ವೆಸ್ಟ್ ಇಂಡೀಸ್, ಚೆನ್ನೈ ಸೂಪರ್ ಕಿಂಗ್ಸ್, ಚಿತ್ತಾಗಾಂಗ್ ಕಿಂಗ್ಸ್, ಕಾಮಿಲಾ ವಿಕ್ಟೋರಿಯನ್ಸ್, ಢಾಕಾ ಡೈನಾಮಿಟ್ಸ್, ಡಾಲ್ಫಿನ್ಸ್ ಎಸೆಕ್ಸ್, ಗುಜರಾತ್ ಲಯನ್ಸ್, ಕೆಂಟ್, ಲಾಹೋರ್ ಕ್ವಾಲಂಡರ್ಸ್ ಮತ್ತು ಮೆಲ್ಬನ್ರ್ಸ್ ಮೊದಲಾದ ತಂಡಗಳ ಪರ ಡ್ವಾನ್ ಬ್ರೇವೋ ಆಡಿದ್ದಾರೆ.
ಇನ್ನು ಶ್ರೀಲಂಕಾದ ಲಸಿತ್ ಮಾಲಿಂಗಾ ಅವರು 339 ಪಂದ್ಯಗಳಲ್ಲಿ 389 ವಿಕೆಟ್ ಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಹಾಗೇ ಸುನೀಲ್ ನರೇನ್ 383 ವಿಕೆಟ್ ಹಾಗೂ ಇಮ್ರಾನ್ ತಾಹೀರ್ 374 ವಿಕೆಟ್ ಗಳನ್ನು ಉರುಳಿಸಿ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.