ಎಮ್.ಎಸ್. ಧೋನಿ… ನಂಬರ್…7… ಧೋನಿಯ ಕ್ರಿಕೆಟ್ ಬದುಕಿಗೆ ಸಂಗೀತದ ಸ್ಪರ್ಶ ನೀಡಿದ ಬ್ರೇವೋ…!
ಡ್ವೇನ್ ಬ್ರೇವೋ… ವೆಸ್ಟ್ ಇಂಡೀಸ್ನ ಆಲ್ ರೌಂಡರ್ ಕ್ರಿಕೆಟಿಗ. ಅಂದ ಹಾಗೇ ಡ್ವೇನ್ ಬ್ರೇವೋ ಅವರು ವೆಸ್ಟ್ ಇಂಡೀಸ್ ತಂಡದಷ್ಟೇ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರೀತಿಸುತ್ತಿದ್ದಾರೆ. ಬಹುಶಃ ವೆಸ್ಟ್ ಇಂಡೀಸ್ ತಂಡದ ನಾಯಕನನ್ನು ಎಷ್ಟು ಇಷ್ಟಪಡುತ್ತಾರೋ ಗೊತ್ತಿಲ್ಲ. ಆದ್ರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಯವರನ್ನು ಜೀವಕ್ಕಿಂತ ಹೆಚ್ಚು ಇಷ್ಟಪಡುತ್ತಾರೆ. ಧೋನಿಯ ಬಗ್ಗೆ ಅಪಾರವಾದ ಅಭಿಮಾನವನ್ನು ಹೊಂದಿದ್ದಾರೆ.
ಈ ಅಭಿಮಾನಕ್ಕೆ ಪೂರಕವಾಗಿ ಡ್ವೇನ್ ಬ್ರೇವೋ ಅವರು, ಧೋನಿ ಹುಟ್ಟು ಹಬ್ಬಕ್ಕೆ ಹೊಸ ಹಾಡೊಂದನ್ನು ಸಂಯೋಜನೆ ಮಾಡಿದ್ದಾರೆ. ನಂಬರ್ 7 ಅನ್ನೋ ಟೈಟಲ್ ನಲ್ಲಿ ಹೊರಬಂದಿರುವ ಈ ಹಾಡನ್ನು ಧೋನಿ ಹುಟ್ಟುಹಬ್ಬದಂತೆ ಬಿಡುಗಡೆಯನ್ನು ಮಾಡಿದ್ದಾರೆ. ತಾನೇ ಗೀತೆ ಬರೆದು, ತಾನೇ ಹಾಡಿರುವ ಈ ಹಾಡಿನಲ್ಲಿ ಧೋನಿಯ ಕ್ರಿಕೆಟ್ ಬದುಕಿನ ಚಿತ್ರಣವನ್ನೇ ಅನಾರವಣಗೊಳಿಸಿದ್ದಾರೆ.
ರಾಂಚಿಯಲ್ಲಿ ಹುಟ್ಟಿ ಬೆಳೆದಿರುವ ಧೋನಿ, ಟೀಮ್ ಇಂಡಿಯಾಗೆ ಎಂಟ್ರಿ ಪಡೆಯುವುದಕ್ಕಿಂತ ಮುನ್ನ ಟಿಕೆಟ್ ಕಲೆಕ್ಟರ್ ಆಗಿದ್ದರು. ಆ ನಂತರ ಧೋನಿಯ ಬ್ಯಾಟಿಂಗ್ ವೈಖರಿ, 2007ರ ವಿಶ್ವಕಪ್ ಗೆಲುವು, 2011ರ ಏಕದಿನ ವಿಶ್ವಕಪ್ ಗೆಲುವು, 2013ರ ಚಾಂಪಿಯನ್ಸ್ ಟ್ರೋಫಿ ಗೆಲುವು, ನಂಬರ್ ವನ್ ಟೆಸ್ಟ್ ಶ್ರೇಯಾಂಕ, ಐಪಿಎಲ್ ಹೀಗೆ ಧೋನಿಯ ಕ್ರಿಕೆಟ್ ಬದುಕಿನ ಪ್ರಮುಖ ಘಟ್ಟಗಳನ್ನು ಹಾಡಿನ ಮೂಲಕ ಬಣ್ಣಿಸಿದ್ದಾರೆ.
ಇನ್ನು ಧೋನಿಯವರ ನೆಚ್ಚಿನ ಹೆಲಿಕಾಪ್ಟರ್ ಶಾಟ್ ಅನ್ನು ಕೂಡ ಬ್ರೇವೋ ಹಾಡಿನಲ್ಲಿ ಕೇಳಬಹುದಾಗಿದೆ. ಎಮ್.ಎಸ್. ಧೋನಿ ನಂಬರ್ 7.. ಟಿ-ಟ್ವೆಂಟಿ ಚಾಂಪಿಯನ್ , 2011 ವಿಶ್ವ ಚಾಂಪಿಯನ್ ಹೀಗೆ ಬ್ರೇವೋ ಅವರ ಹಾಡು ಶುರುವಾಗುತ್ತದೆ.
ಈ ಹಿಂದೆಯೂ ಬ್ರೇವೋ ಅವರು ಹಾಡಿನ ಮೂಲಕ ವೆಸ್ಟ್ ಇಂಡೀಸ್ ತಂಡಕ್ಕೆ ಸ್ಪೂರ್ತಿ ನೀಡಿದ್ದರು. ಚಾಂಪಿಯನ್ ಅನ್ನೋ ಅಲ್ಬಮ್ ಅನ್ನು ಬಿಡುಗಡೆ ಮಾಡಿದ್ದರು. ವೆಸ್ಟ್ ಇಂಡೀಸ್ ತಂಡ ಗೆಲುವಿನ ಸಂಭ್ರಮದಲ್ಲಿ ಈ ಹಾಡಿಗೆ ಹೆಜ್ಜೆ ಹಾಕಿರುವುದನ್ನು ನಾವು ನೋಡಿದ್ದೇವೆ.
ಅಷ್ಟಕ್ಕೂ ಬ್ರೇವೋ ಮತ್ತು ಧೋನಿಯ ನಡುವೆ ಅಂತಹುದ್ದೊಂದು ಸ್ನೇಹವಿದೆ. ಸಿಎಸ್ಕೆ ತಂಡದ ಪರ ಆಡುವಾಗ ಧೋನಿಯನ್ನು ಬ್ರೇವೋ ಅವರು ಬಹಳ ಹತ್ತಿರದಿಂದ ನೋಡಿದ್ದಾರೆ. ಧೋನಿಯ ವ್ಯಕ್ತಿತ್ವವನ್ನು ತಿಳಿದುಕೊಂಡಿದ್ದಾರೆ. ಧೋನಿಯ ಮೇಲಿನ ಅಭಿಮಾನಕ್ಕಾಗಿ ಅವರ 39ನೇ ಹುಟ್ಟು ಹಬ್ಬಕ್ಕೆ ಬ್ರೇವೋ ಎಮ್.ಎಸ್. ಧೋನಿ.. ನಂಬರ್ 7 ಹಾಡನ್ನು ರಚಿಸಿ ಹಾಡಿದ್ದಾರೆ.