ಪ್ರತಿ ಗ್ರಾಮ ಪಂಚಾಯಿತಿಗೊಂದು ಸಹಕಾರ ಸಂಘ; ಸಚಿವ ಎಸ್.ಟಿ ಸೋಮಶೇಖರ್ ಘೋಷಣೆ
1 min read
* ಹಳ್ಳಿ ಹಳ್ಳಿಗೂ ಸಹಕಾರ ಕ್ಷೇತ್ರ ಮುಟ್ಟುವಲ್ಲಿ ಶ್ರಮ
* ಪೈಲೆಟ್ ಕಾರ್ಯಕ್ರಮವಾಗಿ ತುಮಕೂರಿನಲ್ಲಿ ಮೊದಲು ಜಾರಿ
* ಹಂತ ಹಂತವಾಗಿ ರಾಜ್ಯಾದ್ಯಂತ ಯೋಜನೆ ವಿಸ್ತರಣೆ
* ಸಾಲ ನೀಡಿಕೆಯಲ್ಲಿ ಶೇಕಡಾ 82ರಷ್ಟು ಗುರಿ ಸಾಧನೆ
* ಫೆಬ್ರವರಿಯೊಳಗೆ ಸಂಪೂರ್ಣ ಸಾಲ ವಿತರಣೆ
* ತೀರಿಹೋದ ರೈತರ ಸಾಲ ಮನ್ನಾ; ತುಮಕೂರು ಡಿಸಿಸಿ ಬ್ಯಾಂಕ್ ಮಾದರಿ
* ತುಮಕೂರು ಡಿಸಿಸಿ ಬ್ಯಾಂಕ್ ಕಾರ್ಯವೈಖರಿಗೆ ಸಚಿವರ ಮೆಚ್ಚುಗೆ
ತುಮಕೂರು: ಸಹಕಾರ ಕ್ಷೇತ್ರವು ಹಳ್ಳಿ ಹಳ್ಳಿಗಳಿಗೆ ಮುಟ್ಟಬೇಕು ಹಾಗೂ ಸುಲಭವಾಗಿ ರೈತರಿಗೆ ಮತ್ತು ನಾಗರಿಕರಿಗೆ ಸಾಲ ದೊರೆಯಬೇಕು ಎಂಬ ಹಿನ್ನೆಲೆಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೊಂದು ಸಹಕಾರ ಪತ್ತಿನ ಸಹಕಾರ ಸಂಘ (ಪ್ಯಾಕ್ಸ್)ವನ್ನು ಸ್ಥಾಪನೆ ಮಾಡಲಾಗುತ್ತಿದ್ದು, ಪೈಲೆಟ್ ಯೋಜನೆಯಾಗಿ ತುಮಕೂರು ಜಿಲ್ಲೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆ ನಡೆಸಿ ಬಳಿಕ ಮಾತನಾಡಿದ ಸಚಿವರು, ತುಮಕೂರು ಜಿಲ್ಲೆಯಲ್ಲಿ ಒಟ್ಟು 327 ಗ್ರಾಮ ಪಂಚಾಯಿತಿಗಳಲ್ಲಿ 234 ಪ್ಯಾಕ್ಸ್ ಗಳು ಕಾರ್ಯನಿರ್ವಹಿಸುತ್ತಿವೆ. ಉಳಿದ 93 ಗ್ರಾಮ ಪಂಚಾಯಿತಿಗಳಲ್ಲಿ ಪ್ಯಾಕ್ಸ್ ಗಳನ್ನು ತೆರೆಯುತ್ತಿದ್ದು, ಪೈಲೆಟ್ ಯೋಜನೆಯಲ್ಲಿ ಇದನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇನ್ನು 7-8 ತಿಂಗಳಿನಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.
ರಾಜ್ಯಾದ್ಯಂತ ಗ್ರಾಮ ಪಂಚಾಯಿತಿಗಳಲ್ಲಿ ಪ್ರಾರಂಭ
ರಾಜ್ಯದಲ್ಲಿ ಒಟ್ಟು 6019 ಗ್ರಾಮ ಪಂಚಾಯಿತಿಗಳಿದ್ದು, 5400 ಗ್ರಾಮ ಪಂಚಾಯಿತಿಗಳಲ್ಲಿ ಪ್ಯಾಕ್ಸ್ ಗಳಿವೆ. ಉಳಿದ 619 ಗ್ರಾಮ ಪಂಚಾಯಿತಿಗಳಲ್ಲಿ ಹಂತ ಹಂತವಾಗಿ ಪ್ಯಾಕ್ಸ್ ಗಳನ್ನು ಪ್ರಾರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು.
ಸಾಲ ನೀಡಿಕೆಯಲ್ಲಿ ಶೇಕಡಾ 82ರಷ್ಟು ಗುರಿ ಸಾಧನೆ
ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ 24.50 ಲಕ್ಷ ರೈತರಿಗೆ 15300 ಕೊಟಿ ರೂಪಾಯಿ ಬೆಳೆ ಸಾಲ ನೀಡುವ ಗುರಿ ಹೊಂದಲಾಗಿತ್ತು. ಇಂದಿನವರೆಗೆ 19,33,985 (19 ಲಕ್ಷದ 33 ಸಾವಿರದ 985) ರೈತರಿಗೆ 12543.33 (12 ಸಾವಿರದ 543.33) ಕೋಟಿ ರೂಪಾಯಿ ಸಾಲವನ್ನು ನೀಡಲಾಗಿದೆ. ಇದುವರೆಗೆ ಶೇಕಡಾ 82ರಷ್ಟು ಗುರಿ ಸಾಧನೆ ಮಾಡಿದ್ದು, ಫೆಬ್ರವರಿಯೊಳಗೆ ಶೇಕಡಾ 100 ಗುರಿ ಮುಟ್ಟಲು ತಯಾರಿ ನಡೆಸಲಾಗಿದೆ ಎಂದು ಸಚಿವರು ತಿಳಿಸಿದರು.
ಬಡವರ ಬಂಧು, ಸ್ತ್ರೀ ಶಕ್ತಿ ಕಾಯಕ, ಎಸ್ಸಿ ಎಸ್ಟಿ ಹಾಗೂ ಅಲ್ಪಾವಧಿ, ಮಧ್ಯಮಾವಧಿ ಸಾಲಗಳ ಅಡಿಯಲ್ಲಿ 15300 ಕೋಟಿ ರೂಪಾಯಿ ಸಾಲ ವಿತರಣೆ ಮಾಡಲಾಗುತ್ತಿದೆ. ಈಗಾಗಲೇ ಶೇಕಡಾ 82ರಷ್ಟು ಗುರಿ ಸಾಧಿüಸಲಾಗಿದೆ. ಇದೇ ಫೆಬ್ರವರಿ ಮಾಸಾಂತ್ಯದೊಳಗೆ ನೂರಕ್ಕೆ ನೂರು ಗುರಿ ಸಾಧಿಸಲು ನಾನು ಪ್ರತಿ ಡಿಸಿಸಿ ಬ್ಯಾಂಕ್ ಗಳಿಗೆ ಭೇಟಿ ನೀಡಿದಂತಹ ಸಂದರ್ಭದಲ್ಲಿ ಸೂಚನೆ ನೀಡುತ್ತಿದ್ದೇನೆ. ಮಾರ್ಚ್ ಒಳಗೆ ಸಾಲ ನೀಡಿಕೆ ಗುರಿ ತಲುಪುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel