ರಾಷ್ಟ್ರಪತಿಗಳ ಚುನಾವಣೆಯ ವೇಳಾಪಟ್ಟಿ ಪ್ರಕಟಿಸಿದ ಚುನಾವಣಾ ಆಯೋಗ…
ಭಾರತದ 16ನೇ ರಾಷ್ಟ್ರಪತಿಗಳ ಚುನಾವಣೆಯ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ ನಿನ್ನೆ ಪ್ರಕಟಿಸಿದೆ. ನಿನ್ನೆ ದೆಹಲಿಯಲ್ಲಿ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಜುಲೈ 18 ರಂದು ಚುನಾವಣೆ ನಡೆಯಲಿದೆ ಎಂದು ಹೇಳಿದ್ದಾರೆ. ಜೂನ್ 15 ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುವುದು ಮತ್ತು ನಾಮಪತ್ರ ಸಲ್ಲಿಸಲು ಈ ತಿಂಗಳ 29 ಕೊನೆಯ ದಿನಾಂಕವಾಗಿದೆ. 30ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜುಲೈ 21 ರಂದು ಮತ ಎಣಿಕೆ ನಡೆಯಲಿದೆ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಅಧಿಕಾರಾವಧಿಯು ಮುಂದಿನ ತಿಂಗಳು 24 ರಂದು ಕೊನೆಗೊಳ್ಳಲಿದೆ.
ಲೋಕಸಭೆ, ರಾಜ್ಯಸಭೆ ಮತ್ತು ರಾಜ್ಯ ವಿಧಾನಸಭೆಗಳ ಚುನಾಯಿತ ಸದಸ್ಯರನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನಿಂದ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. ಇದು ದೆಹಲಿ ಮತ್ತು ಪುದುಚೇರಿಯ ಶಾಸಕಾಂಗ ಸಭೆಗಳನ್ನೂ ಒಳಗೊಂಡಿದೆ.
ಸಂವಿಧಾನದ ಪ್ರಕಾರ ಅನುಪಾತದ ಪ್ರಾತಿನಿಧ್ಯದ ವ್ಯವಸ್ಥೆಗೆ ಅನುಗುಣವಾಗಿ ರಹಸ್ಯ ಮತದಾನದ ಮೂಲಕ ಚುನಾವಣೆ ನಡೆಸಲಾಗುವುದು ಎಂದು ಕುಮಾರ್ ಹೇಳಿದರು.
776 ಸಂಸತ್ ಸದಸ್ಯರು ಮತ್ತು 4,033 ವಿಧಾನಸಭಾ ಸದಸ್ಯರು ಸೇರಿದಂತೆ ಒಟ್ಟು 4,809 ಮತದಾರರು ಇರಲಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತರು ತಿಳಿಸಿದ್ದಾರೆ. ಒಟ್ಟು ಮತಗಳ ಮೌಲ್ಯ 10 ಲಕ್ಷ 86 ಸಾವಿರದ 431.