ಪರಿಸರ, ವನ್ಯ ಜೀವಿ ಪ್ರೇಮಿ ಗಿರಿವಾಲ್ಮಿಕಿಯವರ ಲೇಖನಿಯಿಂದ ಉದುರಿದ ಪ್ರಕೃತಿ ಸೌಂದರ್ಯದ ನುಡಿಮುತ್ತುಗಳು:
ಅರಣ್ಯ ಬಂಗಲೆಯಿಂದ ನಾನು ಜೊತೆಗಾರ ವಿಶಾಲ್ ವಾಚರ್ ಮಂಜಪ್ಪಣ್ಣನ ಜೊತೆ ಹೊರ ಬಿದ್ದಾಗ ಬೆಳಗಿನ ಸಮಯ 5:30 EPT(Elephent proof trench) ಮಾರ್ಗವಾಗಿ ಸುಮಾರು 10,000 ಹೆಕ್ಟೇರ್ ಕಾಡಿನ ಸುತ್ತಳತೆಯನ್ನು ಗುರುತಿಸುವ ಕಾರ್ಯದಲ್ಲಿ ಪಶ್ಚಿಮ ಘಟ್ಟದ ಕಾಡುದಾರಿ ಹಿಡಿದಿದ್ದೆವು. ಬೆಳಗಿನಿಂದ ಮಧ್ಯಾಹ್ನದವರೆಗಿನ ಅಲೆದಾಟದಿಂದ ಒಂದೇ ಸಮನೆ ಸುರಿಯುತ್ತಿದ್ದ ಜಿನುಗು ಮಳೆಗೂ ಸುತ್ತಲೂ ಆವರಿಸಿದ ಮಂಜಿಗೂ ನಾವು ತೊಟ್ಟಿದ್ದ ಬಟ್ಟೆಗಳೂ ಬಹುಪಾಲು ತೇವವಾಗಿದ್ದವು.
ಆ ಮಳೆ ಗಾಳಿಯಿಂದ ಸಣ್ಣಗೆ ನೆಗಡಿ ಶುರುವಾಗಿತ್ತು ನನಗೆ ಆ ಸಣ್ಣ ಚಳಿಯ ಚಳುವಳಿಯಲ್ಲಿ ಮಂಜಪ್ಪಣ್ಣ, ಆನೆಗಳ ಬಗ್ಗೆ ಆತನಿಗಿದ್ದ ಅನುಭವದ ಕೌತುಕದ ಕಥೆಗಳನ್ನ ಹೇಳಿ ದೇಹದ ತಾಪಮಾನವನ್ನು ಆ ಸಣ್ಣ ಮಳೆಯಲ್ಲೂ ಬಿಸಿಯಾಗಿಸಿ ಬಿಡುತ್ತಿದ್ದ. ಅರಣ್ಯ ಗೃಹದಿಂದ ನಾವು ಹೊರಡುವಾಗ ಬೇಗನೇ ಹಿಂದುರುಗುತ್ತೇವೆಂದು ಭಾವಿಸಿ ನಾವು ಗಮ್ ಬೂಟ್ ಗಳನ್ನು ಧರಿಸಿದೇ ಕಾಡೊಳಗೆ ಮಿಕಗಳ ತರಹ ಹಂದಾಡುತ್ತಿದ್ದರಿಂದ ಜಿಗಣೆಗಳು ಕಂದಾಯ ರೂಪದಲ್ಲಿ ದೇಹದ ತುಸು ರಕ್ತ ಬಸಿದುಕೊಂಡವು, ರಕ್ತ ಹೀರುತ್ತಿದ್ದ ಜಿಗಣೆಗಳನ್ನ ಕಿತ್ತು ಬೀಸುಟುತ್ತಾ ಕಾಡಿನ ಎತ್ತರ ಪ್ರದೇಶದ ಹಿನ್ನೆಲೆಯಲ್ಲಿ ಬೀಸುತ್ತಿದ್ದ ಕುಳಿರ್ಗಾಳಿಗೆ ಈ ಬಯಲು ಸೀಮೆಯ ಮನಸ್ಸು ಮಾತ್ರ ಕೆಳಗೆ ಚೆಕ್ ಪೋಸ್ಟಿನ ಬಳಿ ಮಾರುತ್ತಿದ್ದ ಗೂಡಂಗಡಿಯ ಬಿಸಿ- ಬಿಸಿ ಶುಂಠಿ ಚಹಾಕ್ಕಾಗಿ ಹಂಬಲಿಸುತ್ತಿತ್ತು.
ಪಶ್ಚಿಮ ಘಟ್ಟದ ಮಳೆಕಾಡುಗಳ ಮೇಲ್ಚಾವಣಿ(Tree canopy)ಯನ್ನು ಸವರಿಕೊಂಡು ಸುರಿಯುತ್ತಿದ್ದ ಆಶ್ಲೇಷ ಮಳೆಯ ಗೋಲಕಾರದ ಹನಿಗಳು ಮರಗಳ ಕೆಳಗೆ ಕುಕ್ಕುರುಗಾಲಿನಲ್ಲಿ “ಟೀ” ಗಾಗಿ ಹಪ ಹಪಿಸುತ್ತಿದ್ದ ನನ್ನನ್ನು ಸಂತೈಸುವಂತೆ ಭಾಸವಾಗುತ್ತಿತ್ತು. ಸುತ್ತಲೂ ಮಂಜು ಮುಸುಕಿದ ಹಸಿರು ಮಿಶ್ರಿತ ಶ್ವೇತ ವಾತಾವರಣದವದೂ ಅಲ್ಲಿಂದ ಎದ್ದು ಬೆಟ್ಟದ ನಡುಭಾಗದ ಕಿಬ್ಬಿಯ ನೆತ್ತಿಯ ಮೇಲೆ, ನಾವು ಬಂದು ನಿಂತಾಗ ಆಗ ತಾನೇ ಮಬ್ಬುಗತ್ತಲು ಹರಿದು ನಿಧಾನವಾಗಿ ಬೆಳಗು ಮೂಡ ತೊಡಗಿತ್ತು. ಅದೊಂದು ಉಜ್ವಲ ಮುಂಜಾನೆ, ಜೀವನದಲ್ಲಿ ನಿರಕಾರಣ ವೈರಾಗ್ಯ, ನಶ್ವರತೆ ಮೈಗೂಡಿಸಿಕೊಂಡ ನಿರಶಾವಾದಿಯೂ ಜೀವನೋತ್ಸಾಹಿಯಾಗುವಂಥ ದೇದೀಪ್ಯಮಾನವಾದಂಥಹ ಎಳೆಯ ಬೆಳಗದು.
ಸವಿಸ್ತಾರವಾದ ಮಳೆಕಾಡು ಮೋಡದ ನೆರಳಿನಲ್ಲಿ ಕಪ್ಪಾಗಿ ಕಾಣುತ್ತಿದ್ದರೆ ಒಂದು ಕಡೆ ಮಾತ್ರ ಮೋಡದ ನೆತ್ತಿಯನ್ನು ಸೀಳಿಕೊಂಡು ಬಂದ ಸೂರ್ಯನ ಕಿರಣಗಳು ಸ್ಥಿರವಾಗಿ ಒಂದೇ ಕಡೆ ಕಾಡಿನ ಮೇಲೆ ಬೆಳಕನ್ನು ನಿರ್ದಿಷ್ಟ ಪ್ರದೇಶದ ಮೇಲೆ ಕೋಲ್ಮಿಂಚಿನಂಥ ಬೆಳ್ಳಿ ಬೆಳಕನ್ನು ಚೆಲ್ಲಿ ಇಡೀ ಕಪ್ಪಾದ ಅಡವಿಗೆ ದೃಷ್ಟಿ ಬೊಟ್ಟು ಇಟ್ಟಂತೆ ಕಂಗೂಳಿಸುತ್ತಿತ್ತು ಆ ಕ್ಷಣದಲ್ಲಿ ಸೃಷ್ಟಿಸಿದ ಅನೂಹ್ಯವಾದ ನಿಸರ್ಗದ ಕಣ್ಣು ಕೋರೈಸುವ ಚೆಲುವನ್ನು ಅಕ್ಷರಗಳಲ್ಲಿ ಕಟ್ಟಿಕೊಡುವುದು ಸದ್ಯಕ್ಕೆ ನನ್ನಿಂದಾಗದು.
ತಲೆಯ ಮೇಲೆ ಓಡುವ ಮೋಡಗಳು ಮಳೆ ನೆರಳಿನ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಮಾಯಕ ಲೋಕವನ್ನು ಸೃಷ್ಠಿಸಿದ್ದವು. ಕೂಗಳತೆಯ ದೂರದ ಭೂತನ ಕಾಡಿನ ಮೇಲೆ ವ್ಯೋಮ ಮಾರ್ಗದ ನಿರ್ಮಾನುಷ ಬೀದಿಗಳಲ್ಲಿ ಮೋಡಗಳು ಸಂಚರಿಸುತ್ತಾ ಮಳೆಕಾಡಿನ ಚೆಲುವಿಗೆ ಮನಸೋತು ಅಲ್ಲೇ ಶಾಶ್ವತವಾದ ನಿಲ್ದಾಣ ಮಾಡಿಕೊಂಡಿದ್ದವು. ಆ ಮೋಡದ ಗುಂಪುಗಳು ನನಗೆ ಮಾಂತ್ರಿಕ ಜೀನಿಯ ಚಾಪೆಯಂತೆ ಭಾಸವಾಗುತ್ತಿತ್ತು. ಆ ಮೋಡಗಳ ಅನುಮತಿ ಪಡೆದು ಅದರ ಮೇಲೆ ಹತ್ತಿ ಸವಾರಿ ಮಾಡುತ್ತ ಎತ್ತಲಾದರೂ ಆ ನೀಲಿ ಮೋಡದ ಚಾಪೆಯ ಮೇಲೆ ಆಕಾಶಮಾರ್ಗಿಯಂತೆ ಸಂಚರಿಸುವ ಅಲ್ಲಾವುದ್ದೀನನಂತೆ ಮೋಡದ ಮೇಲೆ ನನಗೆ ತೇಲಿ ಹೋಗಬೇಕೆನಿಸುತ್ತಿತ್ತು.!
ಇಲ್ಲಿ ಸಂಚರಿಸುವವರು ಯಾರೂ ಸಹ ಈ ನಿಸರ್ಗದ ರಮ್ಯ ಸೌಂದರ್ಯೋಪಾಸನೆಯನ್ನು ತಪ್ಪಿಸಿಕೊಳ್ಳುವಂತಿರಲಿಲ್ಲ. ರುದ್ರ ರಮಣೀಯ ಸೋಜಿಗಲ್ಲಿನಂಥಹ ಪಶ್ಚಿಮ ಘಟ್ಟದ ಸೌಂದರ್ಯಕ್ಕೆ ತೃಣರೂಪಿ ಮನುಷ್ಯ ತಲೆಬಾಗದೇ ಇರಲಾಗುವುದಿಲ್ಲ. ದಿಗ್ದಿಗಂತವಾಗಿ ಗಾಂಭೀರ್ಯದಿಂದ ಹಬ್ಬಿದ ಈ ಮಲೆಯೊಳಗೆ ಹೊರ ಜಗತ್ತಿಗೆ ಬಿಟ್ಟು ಕೊಡದ ಕಡು ಮೌನದ ನೀರವತೆ ಇದೆ. ಗಾಢ ವಿಷಾದವಿದೆ! ಎಷ್ಟೋ ಕೌತುಕಗಳು ಅಡಗಿವೆ. ಹಾಗೂ ಅನನ್ಯ ಸೌಂದರ್ಯ ರಾಶಿಯ ಮಡಿಲಲ್ಲೂ ನಿಗೂಢತೆಯನ್ನು ಇಂದಿಗೂ ಕಾಫಿಟ್ಟುಕೊಂಡು ಮನುಷ್ಯ ಜಗತ್ತಿಗೆ ಬಿಟ್ಟುಕೊಡದ ಕುತೂಹಲವಿದೆ. ಭೀಕರತೆ ಇದೆ!
ನಮ್ಮನ್ನು ಪೊರೆಯುವ ಜೀವ ಕಾರುಣ್ಯದ ಈ ಪ್ರಕೃತಿಯ ಮುಂದೆ ಮನುಷ್ಯ ಸಂಕುಲ ಯಾವತ್ತಿದ್ದರೂ ತೃಣಕ್ಕೆ ಸಮಾನವೆಂಬ ಸಾರ್ವಕಾಲಿಕ ಜ್ಞಾನೋದಯ ಶಾಶ್ವತವಾಗಿ ಮನದಲ್ಲಿ ಮೂಡಿತು. ವಿಶಾಲ್ ಮತ್ತು ಮಂಜಪ್ಪಣ್ಣ ಆಗೋ ಹಸುರು ಕೇಕನ್ನು ಕತ್ತರಿಸಿದಂತೆ ಅಲ್ಲಿ ಕಾಣಿಸುತ್ತಿದೆಯಲ್ಲಾ ಅದು “ಕೆಳಗೂರು” ಈಗ ಕೆಳಗಿಳಿದು ಬಿಸಿ “ಟೀ” ಕುಡಿಯೋಣಾ ನಡಿ ಎಂದು ಹೆಗಲ ಮೇಲೆ ಕೈ ಹಾಕಿ ಹೊರಟರು ಎಂದಿನಂತೆ ಮೋಡ ಬೆನ್ನ ಹಿಂದೆ ಮತ್ತೆ ಘನೀಕರಣಗೊಳ್ಳತೊಡಗಿತು..
ಲೇಖನ :- ಗಿರಿವಾಲ್ಮೀಕಿ
ಪರಿಸರ ಹಾಗೂ ವನ್ಯ ಜೀವಿ ಪ್ರೇಮಿ, ಪರಿಸರ ಹೋರಾಟಗಾರ
ಬೆಂಗಳೂರು