ಪರಿಸರ ಪ್ರೇಮಿ ರಾಜ್ಯೋತ್ಸವ ಪುರಸ್ಕೃತ ಶ್ರೀ ಮಾದೇವ ವೇಳಿಪ ಇನ್ನಿಲ್ಲ Saaksha Tv
ಉತ್ತರಕನ್ನಡ: ಜಿಲ್ಲೆಯ ದಟ್ಟಡವಿಯಲ್ಲಿ ವಾಸ ಮಾಡುತ್ತಿದ್ದ ರಾಜ್ಯೋತ್ಸವ ಪುರಸ್ಕೃತ ಶ್ರೀ ಮಾದೇವ ವೇಳಿಪ ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ.
ಜೊಯಿಡಾ ತಾಲೂಕಿನ ನಾಗೋಡಾ ಗ್ರಾಮ ಪಂಚಾಯಿತಿಯ ಕಾರ್ಟೋಳಿ ಗ್ರಾಮದವರಾದ 90 ವರ್ಷದ ಶ್ರೀ ಮಾದೇವ ವೇಳಿಪ ಅವರು ವಯೋಸಹಜ ಕಾಯಿಲೆಯಿಂದ ಇಹಲೋಕ ತೆಜೆಸಿದ್ದಾರೆ. ಇವರಿಗೆ ಮೂರು ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳಿದ್ದು, ಪತ್ನಿ ಪಾರ್ವತಿ ವೇಳಿಪ ಅವರು ಹತ್ತು ವರ್ಷಗಳ ಹಿಂದೆ ನಿಧನರಾಗಿದರು.
ದಾಂಡೇಲಿಯ ಜೊಯಿಡಾ ತಾಲೂಕಿನ ಕಾರ್ಟೋಳಿ ಗ್ರಾಮದ ಕುಣಬಿ ಬುಡಕಟ್ಟು ಸಮುದಾಯದ ಹಿರಿಯರಾದ ಮಾದೇವ ವೇಳಿಪ ಅವರು ಮೂಲತಹ ಕೃಷಿ ಕುಟುಂಬದವರು, ಅಡಿಕೆ, ಬಾಳೆ, ತೆಂಗು, ಕಾಳ ಮೆಣಸು, ಹಲವು ಔಷಧಿ ಗುಣವುಳ್ಳ ಸಸ್ಯಗಳು, ಗೆಡ್ಡೆಗೆಣಸುಗಳನ್ನು ಬೆಳೆಯುತ್ತಿದ್ದರು. ಚಿಕ್ಕಂದಿನಿಂದಲೇ ಪರಿಸರದ ಪರ ಒಲವು ಬೆಳೆಸಿಕೊಂಡಿದ್ದರು.
ವಿಶೇಷವಾಗಿ ಯಾವುದೇ ಕಾಯಿಲೆ, ರೋಗಗಳು ಬಂದರೆ ಗಿಡಮೂಲಿಕೆಗಳ ಮೂಲಕವೇ ಔಷಧಿಯನ್ನು ನೀಡುತ್ತಿದ್ದರು. ಈ ಮೂಲಕ ಅಪಾರ ಜನರ ಪ್ರಾಣವನ್ನು ಉಳಿಸಿದ್ದರು. ಅಲ್ಲದೇ ಮಳೆ, ಪಕ್ಷಿ, ಗಿಡಮರಗಳ ಬಗ್ಗೆ, ರಾಮಾಯಣ, ಮಹಾಭಾರತದ ಕುರಿತಾದ ಸಾಂಪ್ರದಾಯಿಕ ಹಾಡುಗಳನ್ನು ಹಾಡುತ್ತಿದ್ದರು. ಹಾಗೇ ಬುಡಕಟ್ಟು ಕುಣಬಿ ಸಂಸ್ಕೃತಿಯ ಬಗ್ಗೆ ಹಾಡುಗಳ ಮೂಲಕ ಅರಿವು ಮೂಡಿಸುತ್ತಿದ್ದರು.
ಅಲ್ಲದೇ ಇವರು ಕೈಗೆ ವಾಚ್ ಕಟ್ಟದೆ ಹಕ್ಕಿಗಳ ಕೂಗನ್ನು ಆಧರಿಸಿ ನಿಖರವಾದ ಸಮಯ ಹೇಳುವ ಕಲೆ ಅವರಿಗೆ ಕರತಗವಾಗಿತ್ತು. ಅಷ್ಟೊಂದು ಪ್ರಾಣಿಗಳ ಜೊತೆ ಬೆರೆತು ತಮ್ಮ ಜೀವನ ನಡೆಸುತ್ತಿದ್ದರು. ಇನ್ನು ಕಾಡಿನಿಂದ ಒಣ ಎಲೆಗಳನ್ನು ತರುವುದನ್ನು ಅವರು ವಿರೋಧಿಸುತ್ತಿದ್ದರು. ಪರಿಸರ ಸಮತೋಲನದಲ್ಲಿ ಜೇನು ನೊಣಗಳು ಮತ್ತು ಉಂಬಳ ರಕ್ಷಣೆ, ಕಾಡಿನಿಂದ ಒಣ ಎಲೆಗಳನ್ನು ತರಬಾರದು ಎಂದು, ಅದರ ಮಹತ್ವವನ್ನು ಜನರಿಗೆ ತಿಳಿ ಹೇಳುತ್ತಿದ್ದರು. ಅಲ್ಲದೇ 38 ಜಾತಿಯ ಗೆಡ್ಡೆ, ಗೆಣಸುಗಳನ್ನು ಗುರುತಿಸುತ್ತಿದ್ದರು.
ಇವರ ಪರಿಸರ ಕಾಳಜಿ ಅಪಾರ ಜ್ಞಾನವನ್ನ ಪರಿಗಣಿಸಿ 2021ರಲ್ಲಿ ರಾಜ್ಯ ಸರಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ನಾಲ್ಕು ವರ್ಷಗಳ ಹಿಂದೆ ಜಾನಪದ ಪ್ರಶಸ್ತಿ ಕೂಡಾ ಒಲಿದು ಬಂದಿತ್ತು. ಇವರ ಅಂತ್ಯಕ್ರಿಯೆಯು ಕಾರ್ಟೋಳಿಯಲ್ಲಿ ನಡೆಯಲಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.