ಮಾಜಿ ಸಚಿವ ಆರ್.ರೋಷನ್ ಬೇಗ್ ಮನೆ ಮೇಲೆ ಇಡಿ ದಾಳಿ
ಬೆಂಗಳೂರು : ಐಎಂಎ ಹಗರಣದ ಪ್ರಮುಖ ಆರೋಪಿ ಹಾಗೂ ಮಾಜಿ ಸಚಿವ ಆರ್ ರೋಷನ್ ಬೇಗ್ ಮನೆ ಮೇಲೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೋಲ್ಸ್ ಪಾರ್ಕ್ ನಲ್ಲಿರುವ ರೋಷನ್ ಬೇಗ್ ಮನೆ ಸೇರಿದಂತೆ ಬೆಂಗಳೂರಿನ ಆರು ಕಡೆಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಗ್ ಆಸ್ತಿ ಜಪ್ತಿಗೆ ಹೈಕೋರ್ಟ್ ಆದೇಶ ನೀಡಿದ್ದು ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು 16.81 ಕೋಟಿ ರೂ ಆಸ್ತಿ ಸೀಜ್ ಮಾಡಿದ್ದರು.
ವಶಕ್ಕೆ ಪಡೆದುಕೊಂಡಿದ್ದ ಆಸ್ತಿ ಮೌಲ್ಯದ ವರದಿಯನ್ನು ಇಡಿ ಅಧಿಕಾರಿಗಳಿಗೆ ಸಕ್ಷಮ ಪ್ರಾಧಿಕಾರ ಕಳುಹಿಸಿತ್ತು. ಈ ವರದಿ ಆಧರಿಸಿ ಇಡಿ ಅಧಿಕಾರಿಗಳು ಇಂದು ರೋಷನ್ ಬೇಗ್ ಮನೆಗೆ ತೆರಳಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.