ಬೆಂಗಳೂರು : ಏಕ್ ಮಾರ್ ದೋ ತುಕಡ. ತಪ್ಪು ಮಾಡಿದವರ ಬೆತ್ತಲೆ ಮಾಡಿ ಆಗಲಾದರು ಜನಕ್ಕೆ ಅರಿವಾಗಲಿ ಎಂದು ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾದ ಬಗ್ಗೆ ನವರಸನಾಯಕ ಜಗ್ಗೇಶ್ ಆಕ್ರೋಶದಿಂದ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಜಗ್ಗೇಶ್ ಸರಣಿ ಟ್ವೀಟ್ ಗಳನ್ನು ಮಾಡಿದ್ದು, ‘ಸರಿಯಾಗಿ ಬಾಳಿಬದುಕುವ ನಿರ್ಧಾರ ಮಾಡಿ ಶ್ರಮಿಸುವರು ಎಲ್ಲೇ ಇದ್ದರು ಶ್ರೇಷ್ಠವಾಗಿ ಉಳಿಯುತ್ತಾರೆ. ನಾನು ನನ್ನಿಷ್ಟ, ನನ್ನ ಬದುಕು ಎನ್ನುವರ ಮಠಕ್ಕೆ ಸೇರಿಸಿದರೂ ನಶೆ, ಹಾದರದ ಬಿಸಿ ಹೆಂಚಿನ ಮೇಲೆ ಸ್ವಲ್ಪ ಕಾಲಬದುಕಿ ವಿಕೃತ ಆನಂದ ಅನುಭವಿಸಿ ಸೀದು ಹೋಗುತ್ತಾರೆ. ಏಕ್ ಮಾರ್ ದೋ ತುಕಡ, ತಪ್ಪು ಮಾಡಿದವರ ಬೆತ್ತಲೆ ಮಾಡಿ ಆಗಲಾದರು ಜನಕ್ಕೆ ಅರಿವಾಗಲಿ’.
‘ಶ್ರೇಷ್ಠ ಮನುಜನ್ಮ, ಅದು ನಶ್ವರ ಸತ್ಯ. ಆದರೂ ಆ ನಶ್ವರದೇಹ ನಶಿಸುವ ಮುನ್ನ ಸಾರ್ಥಕಪಡಿಸಿ ಬದುಕಬೇಕು. ನಶೆ ಹಾದರದ ಹಿಂದೆ ಬರಿ ಸಿನಿಮಾ ಅಲ್ಲಾ ಸಮಾಜವೇ ಆಕರ್ಷಶಿತ ಆಗುತ್ತಿದೆ. ಯಾರು ಶ್ರಮಪಟ್ಟು ಜೀವನ ಗೆದ್ದಿರುತ್ತಾರೆ. ಅವರ ಹೆಜ್ಜೆ ತಪ್ಪುದಾರಿ ತುಳಿಯದು. ಯಾರು ವಾಮಮಾರ್ಗದಲ್ಲಿ ಗೆದ್ದಿರುತ್ತಾರೆ ಅವರೇ ನಶೆಹಾದರದ ದಾಸರು. ಉಪ್ಪುತಿಂದವ ನೀರು ಕುಡಿಯುವ’ ಎಂದು ಬರೆದುಕೊಂಡಿದ್ದಾರೆ.
ಇದೇ ವೇಳೆ ‘ಬಲವಂತಕ್ಕೆ 2017 ಒಬ್ಬ ರಾಜಕಾರಣಿ ಪಾರ್ಟಿಗೆ ಹೋಗಿದ್ದೆ. ಅರ್ಧ ಗಂಟೆಗೆ ಆ ಜಾಗ ಅಲ್ಲಿದ್ದವರ ಆರ್ಭಟ, ಬಂದು ಸೇರಿದ ಅರ್ಧ ಉಡುಗೆ ಸುಂದರಿಯರು, ಅದಕಂಡು ನಾನು ನನ್ನ ಆತ್ಮೀಯ ಯುವನಟಗೆ ಹೇಳದೆ ಕೇಳದೆ ಲಿಫ್ಟು ಬಳಸದೆ 12 ಮಹಡಿ ಇಳಿದು ಓಡಿದೆವು. ಅದೆಕಡೆ ಇಂದಿಗೂ ನನಗೆ ಯಾರು ಕರೆಮಾಡದಂತೆ ಮೊಬೈಲ್ ವರ್ಜಿಸಿದೆ. ಅಲ್ಲಿದ್ದವರು ಸಮಾಜದ ಎಲ್ಲ ಮುಖಗಳು’ ಎಂದು 2017ರಲ್ಲಿ ನಡೆದ ಘಟನೆಯ ಬಗ್ಗೆ ಜಗ್ಗೇಶ್ ಬರೆದುಕೊಂಡಿದ್ದಾರೆ.