ದಾವಣಗೆರೆ: ರಾಜ್ಯದ ಹಲವೆಡೆ ವ್ಯಾಪಕವಾಗಿ ಮಳೆಯಾಗುತ್ತಿದೆ. ಪರಿಣಾಮ ಹಲವೆಡೆ ಸಾಕಷ್ಟು ಅವಾಂತರಗಳು ಸೃಷ್ಟಿಯಾಗುತ್ತಿವೆ. ಮಳೆಯಿಂದಾಗಿ ಮನೆಯ ಗೋಡೆ ಕುಸಿದ ಪರಿಣಾಮ ವಯೋವೃದ್ಧರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಚನ್ನಗಿರಿ (Channagiri) ತಾಲೂಕಿನ ಸಂತೆಬೆನ್ನೂರಿನಲ್ಲಿ (Santhebennur) ನಡೆದಿದೆ. ಮೃತ ವೃದ್ಧನನ್ನು ಸಂತೆಬೆನ್ನೂರು ನಿವಾಸಿ ಕುಳಗಟ್ಟೆ ಬಸವರಾಜಪ್ಪ (81) ಎಂದು ಗುರುತಿಸಲಾಗಿದೆ. ಪುಷ್ಕರಣಿ ಬೀದಿಯಲ್ಲಿದ್ದ ಮನೆಯಲ್ಲಿ ಗೋಡೆ ಕುಸಿದು ಅವರು ಸಾವನ್ನಪ್ಪಿದ್ದಾರೆ.
ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಗೋಡೆ ಒಂದು ಕಡೆ ವಾಲುತ್ತಿತ್ತು. ಈ ವೇಳೆ ಮನೆಯಲ್ಲಿದ್ದ ಬಸವರಾಜಪ್ಪ, ಆತನ ಮಗ ಹಾಗೂ ಸೊಸೆ ಮನೆಯಿಂದ ಹೊರಬರಲು ಯತ್ನಿಸಿದ್ದಾರೆ. ಮಗ ಹಾಗೂ ಸೊಸೆ ಮನೆಯಿಂದ ಹೊರಗೆ ಬಂದಿದ್ದಾರೆ. ಆದರೆ ಮನೆಯಿಂದ ಹೊರಬರಲು ಯತ್ನಿಸಿದಾಗ ಬಸವರಾಜಪ್ಪನ ಮೇಲೆ ಗೋಡೆ ಕುಸಿದಿದೆ. ಗೋಡೆ ಕುಸಿದು ತೀವ್ರ ಗಾಯಗೊಂಡು ಸಾವನ್ನಪ್ಪಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಚನ್ನಗಿರಿ ತಹಶೀಲ್ದಾರ ರುಕ್ಮಿಣಿಬಾಯಿ ಭೇಟಿ ನೀಡಿದ್ದಾರೆ. ಮೃತರ ಕುಟುಂಬಕ್ಕೆ ಐದು ಲಕ್ಷ ರೂ. ಚೆಕ್ ನ್ನು ಪರಿಹಾರವಾಗಿ ನೀಡಿದ್ದಾರೆ. ಈ ಕುರಿತು ಸಂತೆ ಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪರಿಶೀಲನೆ ನಡೆಸಿದ್ದಾರೆ.