ಉಡುಪಿ: ದೇಶದಲ್ಲಿ ರಾಮನ ಜಪ ಶುರುವಾಗಿದ್ದು, ಭಕ್ತರು ರಾಮನ ದರ್ಶನಕ್ಕಾಗಿ ಕಾಯುತ್ತಿದ್ದಾರೆ. ಮಂದಿರ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ಹಲವಾರು ಬೆಳವಣಿಗೆಗಳು ದೇಶದಲ್ಲಿ ನಡೆಯುತ್ತಿದ್ದು, ವಯೋವೃದ್ಧರೊಬ್ಬರು ಎರಡೂ ಕಾಲು ಇಲ್ಲದಿದ್ದರೂ ನಮ್ಮ ರಾಜ್ಯದಿಂದ ಅಯೋಧ್ಯೆಗೆ ಹೊರಟಿದ್ದಾರೆ.
ರಾಜ್ಯದಿಂದ ವಿಶೇಷ ಭಕ್ತರೊಬ್ಬರು ಅಯೋಧ್ಯೆಗೆ ಗಾಲಿಕುರ್ಚಿಯಲ್ಲಿ ಹೊರಟಿದ್ದಾರೆ. ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರಗಳನ್ನು ಸಂದರ್ಶನ ಮಾಡುತ್ತ ಇವರು, ರಾಮಲಲ್ಲಾನ ದರ್ಶನಕ್ಕೆ ತೆರಳುತ್ತಿದ್ದಾರೆ. ಮಂಜುನಾಥ ಎಂಬ ವಿಶೇಷ ಭಕ್ತರೇ ಈ ರೀತಿ ತೆರಳುತ್ತಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳ, ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿಕೊಟ್ಟು ದಾರಿಯಲ್ಲಿನ ಎಲ್ಲಾ ಕ್ಷೇತ್ರಗಳಿಗೆ ಭೇಟಿ ಮಾಡುತ್ತಿದ್ದಾರೆ.
ಪ್ರತಿ ದಿನ ಇಂತಿಷ್ಟು ಕಿ.ಮೀ ಕ್ರಮಿಸುವುದು ಎಂಬ ಲೆಕ್ಕಾಚಾರದೊಂದಿಗೆ ಒಂದೆರಡು ತಿಂಗಳಲ್ಲಿ ಅಯೋಧ್ಯೆ ತಲುಪುವ ಲೆಕ್ಕಾಚಾರ ಹಾಕಿದ್ದಾರೆ. ಸವದತ್ತಿ ಮೂಲದ ಮಂಜುನಾಥ್, ಹರಿದ್ವಾರ, ಮಥುರಾ, ಆಗ್ರಾ ಸೇರಿದಂತೆ ಈಗಾಗಲೇ ಹಲವಾರು ಪ್ರಸಿದ್ಧ ಕ್ಷೇತ್ರಗಳನ್ನು ಸುತ್ತಿದ್ದಾರೆ. ಯುವಕನಾಗಿದ್ದ ಸಂದರ್ಭದಲ್ಲಿ ಬೈಕ್, ಸೈಕಲ್ ಮೇಲೆ ಸುತ್ತಾಡಿದ್ದಾರೆ. ಈಗ ಗಾಲಿ ಕುರ್ಚಿಯ ಮೂಲಕ ಹೊರಟಿದ್ದಾರೆ.